
ಬಲವಂತವಾಗಿ ರೈತರ ಭೂಮಿ ಕಿತ್ತುಕೊಳ್ಳಬೇಡಿ”: ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಆಗ್ರಹ
ಬೆಂಗಳೂರು: “ಪ್ರಸ್ತಾವಿತ ಟೌನ್‌ಶಿಪ್ ಯೋಜನೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಬೇಡ. ರೈತರ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಕೈಹಾಕಬಾರದು,” ಎಂದು ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ರಾಜ್ಯ ಸರ್ಕಾರಕ್ಕೆ ತೀಕ್ಷ್ಣವಾಗಿ ಮನವಿ ಮಾಡಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು, “ಈ ಟೌನ್‌ಶಿಪ್ ಬಗ್ಗೆ ಯೋಜನೆ ರೂಪಿತವಾಗಿದ್ದು ಬರೋಬ್ಬರಿ 15 ವರ್ಷಗಳ ಹಿಂದೆ. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ದೊಡ್ಡ ಹೋರಾಟದ ಬಳಿಕವೇ ಈ ಯೋಜನೆಯನ್ನು ಕೈಬಿಡಲಾಗಿತ್ತು. ಇಷ್ಟು ಸುದೀರ್ಘ ಅವಧಿಯಲ್ಲಿ ಯಾವುದೇ ಸರ್ಕಾರ ಅಥವಾ ನಾಯಕರು ಈ ಯೋಜನೆಗೆ ಕೈಹಾಕುವ ಸಾಹಸ ಮಾಡಿರಲಿಲ್ಲ. ಹೀಗಿರುವಾಗ ಈಗಿನ ಸರ್ಕಾರ ಇದನ್ನು ಮತ್ತೆ ಮುನ್ನೆಲೆಗೆ ತರುತ್ತಿರುವುದು ಸರಿಯಲ್ಲ,” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪರ್ಯಾಯ ಮಾರ್ಗದ ಸಲಹೆ ರೈತರ ಹಿತರಕ್ಷಣೆ ಬಗ್ಗೆ ಧ್ವನಿ ಎತ್ತಿದ ವಿಶ್ವನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಮುಖ ಮನವಿಗಳನ್ನು ಮುಂದಿಟ್ಟಿದ್ದಾರೆ.
ಜೀವನಾಧಾರವಾಗಿರುವ ರೈತರ ಫಲವತ್ತಾದ ಜಮೀನನ್ನು ಅವರ ಒಪ್ಪಿಗೆಯಿಲ್ಲದೆ ಬಲವಂತವಾಗಿ ಸರ್ಕಾರ ಸ್ವಾಧೀನಪಡಿಸಿಕೊಳ್ಳಬಾರದು.
ಟೌನ್‌ಶಿಪ್ ಮಾಡಲೇಬೇಕು ಎಂದಿದ್ದರೆ ಫಲವತ್ತಾದ ಭೂಮಿ ಬಿಟ್ಟು, ಕೃಷಿಗೆ ಯೋಗ್ಯವಲ್ಲದ ಬರಡು ಭೂಮಿಯಲ್ಲಿ ಯೋಜನೆ ಜಾರಿಗೊಳಿಸಲು ನಮ್ಮ ಅಭ್ಯಂತರವಿಲ್ಲ. ಸರ್ಕಾರ ಎನ್ನುವುದು ಜನರ ಮತ್ತು ರೈತರ ಕಲ್ಯಾಣಕ್ಕಾಗಿ ಇರಬೇಕೇ ಹೊರತು, ಅವರ ಹೊಟ್ಟೆಯ ಮೇಲೆ ಹೊಡೆಯಲು ಅಲ್ಲ ಎಂದು ಅವರು ನೆನಪಿಸಿದ್ದಾರೆ.
ಯೋಜನೆಯ ವಿರುದ್ಧ ರೈತರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಶಾಸಕ ಎಸ್.ಆರ್. ವಿಶ್ವನಾಥ್ ಅವರ ಈ ಹೇಳಿಕೆ ಸರ್ಕಾರದ ಮುಂದಿನ ನಡೆಗೆ ಭಾರಿ ಕುತೂಹಲ ಮೂಡಿಸಿದೆ.
