Blogರಾಷ್ಟ್ರೀಯ-National

ಷರತ್ತುಬದ್ಧ ಜಾಮೀನು ಮಂಜೂರು : ದೆಹಲಿ ಸಿಎಂ ಕೇಜ್ರಿವಾಲ್‌ಗೆ ಬಿಡುಗಡೆ ಭಾಗ್ಯ

ನವದೆಹಲಿ : ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಗುಡ್‌ನ್ಯೂಸ್ ನೀಡಿದೆ. ಈ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಅರವಿಂದ್‌ ಕೇಜ್ರಿವಾಲ್‌ಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.ಸೆ.13- ದೆಹಲಿ ಅಬಕಾರಿ ಪರಿಷ್ಕರಣ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಪಟ್ಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಆರು ತಿಂಗಳ ನಂತರ ಬಿಡುಗಡೆಯ ಭಾಗ್ಯ ಲಭಿಸಿದೆ.ಯಾವುದೇ ಕ್ಷಣದಲ್ಲಿ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಕೇಜ್ರಿವಾಲ್ ಅವರು ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಇಲ್ಲವೇ ಮಾಧ್ಯಮಗಳಿಗೆ ಹೇಳಿಕೆ ನೀಡದಿರುವುದು ಸರ್ಕಾರಿ ಕಡತಗಳಿಗೆ ಸಹಿ ಹಾಕದಿರುವುದು, ಕಚೇರಿಗಳಿಗೆ ತೆರಳದಿರುವುದು, 10 ಲಕ್ಷದ ಎರಡು ಬಾಂಡ್ಗಳು, ವಿಚಾರಣಾಧೀನ ನ್ಯಾಯಾಲಯಕ್ಕೆ ಸಹಕಾರ ಕೊಡುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ.

ಅರವಿಂದ ಕೇಜ್ರಿವಾಲ್ ಮತ್ತು ಸಿಬಿಐ ಪರ ವಕೀಲರನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5 ರಂದು ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು. ಪ್ರಕರಣದ ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗದಿರುವುದಕ್ಕೆ ಕೇಜ್ರಿವಾಲ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.

ಕೇಜ್ರಿವಾಲ್‌ಗೆ ಜಾಮೀನು ನೀಡುವ ವೇಳೆ ಆದೇಶದಲ್ಲಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಸಿಬಿಐನಿಂದ ಬಂಧನ ಕಾನೂನು ಬದ್ಧವಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ರೂ. 10 ಲಕ್ಷ ಜಾಮೀನು ಬಾಂಡ್ ಮೇಲೆ ಬಿಡುಗಡೆಯಾಗಬೇಕಿದೆ. ಈ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ದೆಹಲಿ ಸಿಎಂಗೆ ಅವಕಾಶವಿಲ್ಲ ಎಂದು ಮಹತ್ವದ ಸೂಚನೆ ನೀಡಿದರು

ಕೇಜ್ರಿವಾಲ್ ಅವರು ನೇರವಾಗಿ ಜಾಮೀನಿಗಾಗಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು ಮತ್ತು ನಂತರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈಗ ರದ್ದಾದ ದೆಹಲಿ ಅಬಕಾರಿ ನೀತಿ 2021-22 ರಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಜೂನ್ 26 ರಂದು ಅಬಕಾರಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾಗ ಸಿಬಿಐ ಅವರನ್ನು ಬಂಧಿಸಿತ್ತು.

ಅಬಕಾರಿ ಪರಿಷ್ಕರಣ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟಿದ್ದ ದೆಹಲಿ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ, ರಾಜ್ಯಸಭಾ ಸದಸ್ಯ ಸಂಜಯ್ಸಿಂಗ್, ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತ ಹಾಗೂ ವಿನಯ್ ನಾಯರ್ ಅವರುಗಳಿಗೆ ಈಗಾಗಲೇ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.

Share with Friends
author avatar
News Desk