ದಳಪತಿ ವಿಜಯ್ ರಾಜಕೀಯಕ್ಕೆ ಅಧಿಕೃತ ಎಂಟ್ರಿ, ಪಕ್ಷದ ಬಾವುಟ-ಚಿಹ್ನೆ ಅನಾವರಣ
ಚೆನ್ನೈ : ತಮಿಳು ನಟ ದಳಪತಿ ವಿಜಯ್ ಈ ಹಿಂದೆ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಘೋಷಿಸಿದ್ದರು. ‘ತಮಿಳಗ ವೆಟ್ರಿ ಕಳಗಂ’ ಎಂದು ಪಕ್ಷಕ್ಕೆ ಹೆಸರಿಟ್ಟಿದ್ದರು. ಇದೀಗ ಚುನಾವಣಾ ಆಯೋಗದಿಂದ ಅವರು ಕೇಳಿದ್ದ ಪಕ್ಷದ ಬಾವುಟ, ಚಿಹ್ನೆಗೆ ಅನುಮತಿ ಸಿಕ್ಕಿದೆ. ಇದೀಗ ಅಧಿಕೃತವಾಗಿ ವಿಜಯ್ ತಮ್ಮ ಪಕ್ಷದ ಬಾವುಟ, ಆಂಥೆಮ್ ಅನಾವರಣ ಮಾಡಿದ್ದಾರೆ.
ಇಂದು ಚೆನ್ನೈನಲ್ಲಿರುವ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಕಚೇರಿಯಲ್ಲಿ ಬಾವುಟ ಹಾಗೂ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸ್ವತಃ ವಿಜಯ್ ಬಾವುಟ, ಚಿಹ್ನೆ ಅನಾವರಣ ಮಾಡಿದರು. ಬಳಿಕ ದೊಡ್ಡ ಧ್ಜಜಾರೋಹಣ ಮಾಡಿದರು. ಇನ್ನು ಮರೂನ್ ಹಾಗೂ ಹಳದಿ ಬಣ್ಣದ ಬಾವುಟದಲ್ಲಿ ಎರಡು ಆನೆಗಳು ಹಾಗೂ ವಾಗೈ ಪುಷ್ಪವನ್ನು ನೋಡಬಹುದು.
ಇನ್ನು ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಬಾವುಟ ಅನಾವರಣ ಕಾರ್ಯಕ್ರಮಕ್ಕೆ ವಿಜಯ್ ಪೋಷಕರು ಆಗಮಿಸಿದ್ದರು. ಇದೇ ವೇಳೆ ಎಸ್. ತಮನ್ ಸಂಗೀತದಲ್ಲಿ ಪಕ್ಷದ ಧ್ಯೇಯ ಗೀತೆಯನ್ನು ದಳಪತಿ ಬಿಡುಗಡೆ ಮಾಡಿದರು. ವಿವೇಕ್ ಈ ಗೀತೆಗೆ ಸಾಹಿತ್ಯ ಬರೆದಿದ್ದಾರೆ. ಇನ್ನು ಧ್ವಜಾರೋಹಣ ನೆರವೇರಿಸಿದ ವಿಜಯ್ ಪಕ್ಷದ ಕಾರ್ಯಕರ್ತರೊಂದಿಗೆ ಅಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಈ ಹಿಂದೆ ಹಲವರು ರಾಜಕೀಯರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳುನಾಡಿನದಲ್ಲಿ ಇದಕ್ಕೆ ದೊಡ್ಡ ಪರಂಪರೆಯೇ ಇದೆ. ಇವತ್ತಿಗೂ ಕಮಲ್ ಹಾಸನ್, ಉದಯನಿಧಿ ಸ್ಟಾಲಿನ್, ಶರತ್ಕುಮಾರ್ ದಂಪತಿ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಎಂಜಿಆರ್, ಕರುಣಾನಿಧಿ, ವಿಜಯ್ಕಾಂತ್ ಸೇರಿದಂತೆ ಹಲವರು ಈ ಪ್ರಯತ್ನ ಮಾಡಿ ಗೆದ್ದಿದ್ದರು.
