BlogLatestTop Storiesರಾಜ್ಯ-Karnataka

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ ಡೆಂಘೀ ಪ್ರಕರಣಗಳು

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ಈವರೆಗೆ ಪ್ರಕರಣಗಳ ಸಂಖ್ಯೆ 16 ಸಾವಿರದ ಗಡಿ ದಾಟಿದೆ.ರಾಜ್ಯದಲ್ಲಿ 16492 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಯಲ್ಲಿ 454 ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ. ರಾಜ್ಯದಲ್ಲಿ 3224 ಡೆಂಘೀ ಸಕ್ರಿಯ ಪ್ರಕರಣಗಳಿದ್ದು ಅದರಲ್ಲಿ 2652 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಡೆಂಘೀ ಜ್ವರಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 572 ಮಂದಿಯಲ್ಲಿ 559 ಮಂದಿಗೆ ಸಾಮನ್ಯ ವಾರ್ಡ್ ನಲ್ಲಿ 13 ಮಂದಿಗೆ ಐಸಿಯೂನಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಡೆಂಘೀ ಹಾವಳಿಗೆ 10 ಮಂದಿ ಬಲಿಯಾಗಿದ್ದು ಕಳೆದ 24 ಗಂಟೆಯಲ್ಲಿ ಒಂದು ವರ್ಷದೊಳಗಿನ 12 ಮಕ್ಕಳಿಗೆ ಡೆಂಘೀ ಪತ್ತೆಯಾಗಿದೆ.

ಇಲ್ಲಿಯವರೆಗೂ ಒಂದು ವರ್ಷದೊಳಗಿನ 299 ಮಕ್ಕಳಲ್ಲಿ ಡೆಂಘೀ ದೃಡಗೊಂಡಿದೆ. ಕಳೆದ 24 ಗಂಟೆಯಲ್ಲಿ ಒಂದು ವರ್ಷದಿಂದ 18 ವರ್ಷದೊಳಗಿನ 149 ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ.ಇಲ್ಲಿಯವರೆಗೂ ಒಂದು ವರ್ಷದಿಂದ 18 ವರ್ಷದೊಳಗಿನ 5783 ಮಂದಿಯಲ್ಲಿ ಡೆಂಘೀ ದೃಡಪಟ್ಟಿದ್ದು ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 293 ಜನರಲ್ಲಿ  ಡೆಂಘೀ ಪತ್ತೆಯಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ  ಡೆಂಘೀ ಪ್ರಕರಣಗಳು 7 ಸಾವಿರದ ಗಡಿದಾಟಿದ್ದು ಕಳೆದ 24 ಗಂಟೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 210 ಪ್ರಕರಣಗಳು ದೃಡಗೊಂಡಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀ ಗೆ ಇಲ್ಲಿಯವರೆಗೆ ಮೂರು ಬಲಿಯಾಗಿದ್ದಾರೆ.

ಅಕ್ಟೋಬರ್ ಕೊನೆಯವರೆಗೂ ಇಲ್ಲಾ ಡೆಂಘೀ ರಿಲೀಫ್ :
ವಾತಾವರಣದ ಬದಲಾವಣೆಯಿಂದ ಡೆಂಘೀ ಕೇಸ್‌ಗಳ ಹೆಚ್ಚಳಕ್ಕೆ ಕಾರಣವಾಗಿದ್ದು ಮಳೆರಾಯನ ಆರ್ಭಟ ಕಮ್ಮಿಯಾಗುವರೆಗೂ ಡೆಂಘೀಯಿಂದ ಇಲ್ಲಾ ಮುಕ್ತಿ ಎನ್ನತ್ತಾರೆ ವೈದ್ಯರು. ಬೆಂಗಳೂರಿನ ಮಹಾದೇವಪುರ,ಯಲಹಂಕ, ಪುಲಕೇಶಿ ನಗರ, ಪೀಣ್ಯ ಈ ಭಾಗದಲ್ಲಿ ಡೆಂಘೀ ಕೇಸ್ ಗಳು ಹೆಚ್ಚಳವಾಗಿದ್ದು ಸದ್ಯ ಅದಷ್ಟೂ ನೀರು ಸಂಗ್ರಹಿಸಿ ಇಡದಂತೆ ವೈದ್ಯರಿಂದ ಸೂಚನೆ ನೀಡಿದ್ದಾರೆ. ಎಸಿ, ವಾಷಿಂಗ್ ಮಿಷನ್ ಗಳಲ್ಲಿ ನೀರು ನಿಲ್ಲದಂತೆ, ಮನೆಯ ಮಹಡಿಗಳನ್ನು ಅದಷ್ಟೂ ಸ್ವಚ್ಚ ಹಾಗೂ ನೀರು ನಿಲ್ಲದಂತೆ ನೋಡಿಕೊಳ್ಳಲು ವೈದ್ಯರ ಸಲಹೆ ನೀಡಿದ್ದಾರೆ.

Share with Friends
author avatar
News Desk