
ತಾಕತ್ತಿದ್ರೆ ನನ್ನ ಅರೆಸ್ಟ್ ಮಾಡ್ಸು : ಕುಮಾರಸ್ವಾಮಿ
ಬೆಂಗಳೂರು.ಅ.15- ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.ಸ್ಟಿಂಗ್ ಪ್ರಕರಣದಲ್ಲಿ ಅಗತ್ಯಬಿದ್ದರೆ ಕೇಂದ್ರ ಸಚಿವ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.
ಇದಕ್ಕೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಾಚಾಮಗೋಚರ ತಿರುಗೇಟು ನೀಡಿರುವ ಕುಮಾರಸ್ವಾಮಿ, ಉತ್ತರ ಕೊಡೋದಕ್ಕೆ ಆಗಲ್ವಂತೆ, ಯಾತಕ್ಕೆ ಮತ್ತೆ ಇರೋದು ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಟಿಂಗ್ ಆಪರೇಷನ್ನಲ್ಲಿ ಶಾಮೀಲಾದ ರಾಕೇಶ್ ಶೆಟ್ಟಿ ಮತ್ತು ಪ್ರಶಾಂತ್, ಕೃಪಾಳ್ ಅವರನ್ನು ಪ್ರಶ್ನಿಸದೆ,ತಮ್ಮ ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸುತ್ತಿರುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು.
ಈ ಮಧ್ಯೆ ತಾಕತ್ತಿದ್ರೆ ಆರೆಸ್ಟ್ ಮಾಡಲಿ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಸವಾಲಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು,ನೀವು ತಪ್ಪು ಮಾಡಿದ್ದರೆ ಅರೆಸ್ಟ್ ಮಾಡೇ ಮಾಡುತ್ತೇವೆ ಎಂದಿದ್ದಾರೆ. ತನಿಖೆ ಮಾಡುವುದನ್ನು ಅವರಿಂದ ನಾನು ಕಲಿಯಬೇಕಾಗಿಲ್ಲ. ನಾವು ಮಾರ್ಯದೆ ಕೊಟ್ಟು ಮಾತನಾಡುತ್ತಿದ್ದೇವೆ.ಏಕವಚನದಲ್ಲಿ ಮಾತನಾಡಿದ್ರೆ ಹೆದರಿಕೊಳ್ಳಲ್ಲ. ಆರ್ಎಸ್ಎಸ್ಗೆ ಹೆದರಿಕೊಳ್ಳಲಿಲ್ಲ, ನಿಮಗೆ ಏಕೆ ಹೆದರುತ್ತೇನೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಮರ್ಯಾದೆ ಕೊಟ್ಟು ಮಾತನಾಡಿದರೆ ನಾವು ಕೇಳಲು ರೆಡಿಯಿದ್ದೇವೆ. ನೀವು ಮಾತನಾಡುವ ಭಾಷೆಯಲ್ಲೇ ನಾವು ಮಾತನಾಡಲು ರೆಡಿ. ಗಾಳಿಯಲ್ಲಿ ಗುಂಡು ಹಾರಿಸುವುದಕ್ಕಿಂತ ಮಾಹಿತಿ ಇದ್ರೆ ಕೊಡಿ. ಅದು ಬಿಟ್ಟು ನನ್ನ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡಿದ್ರೆ ಹೇಗೆ? ತನಿಖೆ ಮಾಡುವಾಗ ಕೆಲವರ ಹೆಸರು ಬಂದಿದೆ, ಅದಕ್ಕಾಗಿ ವಿಚಾರಣೆ ಮಾಡುತ್ತಿದ್ದೇವೆ. ನೀವು ನನ್ನ ನಿಂದನೆ ಮಾಡೋದ್ರಿಂದ ಏನೂ ಸಾಧನೆ ಮಾಡೋದಿಲ್ಲ. ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
