LatestTop Storiesಬೆಂಗಳೂರು-Bengaluru

ಕುಮಾರಸ್ವಾಮಿ ವಿರುದ್ಧ ಬೇಳೂರು ಗೋಪಾಲಕೃಷ್ಣ ಕಿಡಿ

ಬೆಂಗಳೂರು.ಅ.15- ಸ್ಟಿಂಗ್ ಆಪರೇಷನ್ ವಿಚಾರವಾಗಿ ಕಳೆದೆರಡು ಮೂರು ದಿನಗಳಿಂದ ಕಾಂಗ್ರೆಸ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ ಶಾಸಕ ಬೇಳೂರು ಗೋಪಾಲಕೃಷ್ಣ,ಕುಂಬಳಕಾಯಿ ಕಳ್ಳ ಎಂದರೆ ನೀವು ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆ ಕುಮಾರಸ್ವಾಮಿ ವಿಧಾನಸೌಧದ ಕೆಂಗಲ್ ಗೇಟ್ ಮೂಲಕ ಬಂದು ಪೆನ್‌ಡ್ರೈವ್ ತೋರಿಸಿದ್ದ ಪ್ರಕರಣದಲ್ಲಿ ನಂತರ ಏನಾಯಿತು ಎಂದು ಪ್ರಶ್ನಿಸಿದರು.

ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಯಾರ ಮೇಲೆ ಅನುಮಾನವಿರುತ್ತದೆಯೋ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ಗೃಹ ಇಲಾಖೆಗೆ ಇದೆ. ಆದರೆ, ಹೇಳಿಕೆ ನೀಡುವವರೇ ಬಂಧನ ಮಾಡಬಾರದು ಎಂದು ಹೇಳುವುದು ಸರಿಯೇ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರು ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆಯಾಗಬೇಕು. ತನಿಖೆಗೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಕಾಯ್ದೆ ರಚಿಸಬೇಕೆಂಬ ಅಭಿಪ್ರಾಯದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು,ಏನು ಕಾಯ್ದೆ ಮಾಡುತ್ತೀರಿ? ವಿಪಕ್ಷಗಳು ಕುಳಿತು ಏನು ಚರ್ಚೆ ಮಾಡ್ತಾರೆ? ಎಂದು ಪ್ರಶ್ನಿಸಿದರು.

Share with Friends
author avatar
Digital Desk