
ಆಂತರಿಕ ಸಂಘರ್ಷದಿಂದ ಕೆಪಿಎಸ್ಸಿ ಪ್ರಕರಣ ಬಯಲಿಗೆ
ಬೆಂಗಳೂರು,ಅ.9- ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ನಡೆದಿರುವ ನೇಮಕಾತಿ ಅಕ್ರಮಗಳ ಹಿಂದೆ ಅಧಿಕಾರದ ಪೈಪೋಟಿ ಹಾಗೂ ಸದಸ್ಯರ ನಡುವಿನ ಆಂತರಿಕ ಸಂಘರ್ಷ ಪ್ರಮುಖ ಪಾತ್ರ ವಹಿಸಿರುವುದು ಪತ್ತೆಯಾಗಿದೆ.ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಪೈಪೋಟಿಯೇ ಆಯೋಗದೊಳಗಿನ ಕೆಲವು ಅಕ್ರಮಗಳು ಬಹಿರಂಗಗೊಳ್ಳಲು ಕಾರಣವಾಗಿದೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.ಇಡಿ ಕಸ್ಟಡಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ಅಧಿಕಾರಾವಧಿ ೨೦೨೭ರ ಫೆಬ್ರವರಿಯಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಮುಂದಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ವಿಚಾರವಾಗಿ ಆಯೋಗದ ಸದಸ್ಯರ ನಡುವೆ ಪೈಪೋಟಿ ಆರಂಭವಾಗಿತ್ತು.
ಕಳೆದ ಮೂರು ವರ್ಷಗಳಲ್ಲಿ ಆಯೋಗದ ಸದಸ್ಯರ ಸಂಖ್ಯೆ ೮ರಿಂದ ೧೮ಕ್ಕೆ ಏರಿಕೆಯಾಗಿದ್ದು, ಇದರೊಂದಿಗೆ ಗುಂಪುಗಾರಿಕೆ ಮತ್ತು ಅಧಿಕಾರಕ್ಕಾಗಿ ಪೈಪೋಟಿಯೂ ಹೆಚ್ಚಾಗಿತ್ತು ಎಂದು ವರದಿಯಾಗಿದೆ.
ಮಗಳ ಪ್ರಕರಣ ಸೋರಿಕೆ:
ಶಿವಶಂಕರಪ್ಪ ಸಾಹುಕಾರ್ ಅವರ ಮಗಳು ಪಶುವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪ ಪ್ರಕರಣದ ಆರಂಭಿಕ ಬೆಳವಣಿಗೆಗಳಲ್ಲಿ ಒಂದಾಗಿದೆ.ಈ ವಿಚಾರ ಆಯೋಗದ ಕೆಲವು ಸದಸ್ಯರಿಗೆ ಮೊದಲೇ ತಿಳಿದಿತ್ತು ಎನ್ನಲಾಗಿದ್ದು, ಅಧ್ಯಕ್ಷರನ್ನು ಸ್ಥಾನದಿಂದ ಕೆಳಗಿಳಿಸಲು ಅಥವಾ ರಾಜೀನಾಮೆ ನೀಡುವಂತೆ ಒತ್ತಡ ಹೇರಲು ವಿರೋಧಿ ಬಣದ ಸದಸ್ಯರು ಪ್ರಕರಣದ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಭ್ರಷ್ಟಾಚಾರದ ಆರೋಪ:
ಈ ಪ್ರಕರಣ ಬಹಿರಂಗವಾದ ಬಳಿಕ ಕೆಪಿಎಸ್ಸಿಯ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು, ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರಗಳು ಹಾಗೂ ಭ್ರಷ್ಟಾಚಾರದ ಆರೋಪಗಳು ಒಂದೊಂದಾಗಿ ಮುನ್ನೆಲೆಗೆ ಬಂದಿವೆ.
ಐಎಎಸ್ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ನೇತೃತ್ವದ ಗುಂಪು ಹಾಗೂ ಕೆಪಿಎಸ್ಸಿ ಅಧ್ಯಕ್ಷರು ಮತ್ತು ಇತರ ಸದಸ್ಯರನ್ನು ಒಳಗೊಂಡ ಗುಂಪಿನ ನಡುವೆ ಆಂತರಿಕ ಸಂಘರ್ಷವಿತ್ತು ಎಂಬ ಮಾಹಿತಿಯೂ ವರದಿಯಾಗಿದೆ.
10 ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ:
ಕೆಪಿಎಸ್ಸಿಯ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹತ್ತು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನು ಮುಂಚಿತವಾಗಿ ಒದಗಿಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಹಣಕಾಸಿನ ವ್ಯವಹಾರಗಳು ನಡೆದಿರುವುದನ್ನು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ವರದಿಯಾಗಿದೆ.ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಹತ್ತು ಅಭ್ಯರ್ಥಿಗಳು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ ಮತ್ತು ವಿಲ್ಲಾದಲ್ಲಿ ತಂಗಿದ್ದರು ಎನ್ನಲಾಗಿದೆ. ಅಲ್ಲಿ ಅವರಿಗೆ ೮೦ ಪ್ರಶ್ನೆಗಳು ಹಾಗೂ ಅವುಗಳ ಸರಿಯಾದ ಉತ್ತರಗಳನ್ನು ನೆನಪಿಟ್ಟುಕೊಳ್ಳಲು ತರಬೇತಿ ನೀಡಲಾಗಿತ್ತು ಎಂಬ ಆರೋಪವಿದೆ.
40ರಿಂದ 50 ಲಕ್ಷ ಸಂಗ್ರಹ:
ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಒದಗಿಸುವುದಕ್ಕಾಗಿ ಪ್ರತಿ ಅಭ್ಯರ್ಥಿಯಿಂದ ?೪೦ ಲಕ್ಷದಿಂದ ?೫೦ ಲಕ್ಷದವರೆಗೆ ಹಣ ಪಡೆಯಲಾಗಿತ್ತು ಎಂಬ ಆರೋಪ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಮೂಲಕ ಪ್ರಶ್ನೋತ್ತರಗಳನ್ನು ಪಡೆಯಲಾಗಿತ್ತು ಎನ್ನಲಾಗಿದ್ದು, ಬಸವರಾಜ ಕನ್ನಾಳೆ, ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಆಯೋಗದ ಸದಸ್ಯೆ ಬಿ.ವಿ. ಗೀತಾ ಅವರಿಗೂ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳು ತಲುಪಿದ್ದವು ಎಂಬ ಆರೋಪ ಕೇಳಿಬಂದಿದೆ. ಇವರು ಅಭ್ಯರ್ಥಿಗಳಿಗೆ ಪ್ರಶ್ನೋತ್ತರಗಳನ್ನು ಒದಗಿಸುವಲ್ಲಿ ಪಾತ್ರ ವಹಿಸಿದ್ದರು ಎನ್ನಲಾಗಿದೆ.
ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರ ಪಾತ್ರ ಮತ್ತು ಹೊಣೆಗಾರಿಕೆಯನ್ನು ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ನಿರ್ಧರಿಸಬೇಕಿದೆ.
ಪ್ರಾಮಿಸರಿ ನೋಟ್ ಜಪ್ತಿ:
ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸುಮಾರು ?೮೦ ಲಕ್ಷ ಮೌಲ್ಯದ ಸಹಿ ಮಾಡಿದ ಖಾಲಿ ಚೆಕ್ಗಳು ಹಾಗೂ ಖಾಲಿ ಪ್ರಾಮಿಸರಿ ನೋಟ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.
ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರಗಳ ತನಿಖೆಯಲ್ಲಿ ಈ ದಾಖಲೆಗಳು ಮಹತ್ವ ಪಡೆದಿವೆ. ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಲಾಗಿತ್ತೇ, ಹಣಕಾಸಿನ ವ್ಯವಹಾರಗಳಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಮತ್ತು ಅಕ್ರಮಗಳ ಹಿಂದೆ ಕಾರ್ಯನಿರ್ವಹಿಸಿದ ಜಾಲ ಯಾವುದು ಎಂಬುದನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗಳು ಮುಂದಾಗಿವೆ.
ಅಧಿಕಾರದ ಸಂಘರ್ಷ:
ಕೆಪಿಎಸ್ಸಿಯ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು, ಸದಸ್ಯರ ನಡುವಿನ ಅಧಿಕಾರದ ಸಂಘರ್ಷ ಹಾಗೂ ಕೋಟ್ಯಂತರ ರೂಪಾಯಿ ಹಣದ ವ್ಯವಹಾರಗಳ ಆರೋಪಗಳು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
