
ಶಾಲೆ ಕೊಠಡಿ ಕೊರತೆ: ಹೊರಾಂಗಣದಲ್ಲೇ ವಿದ್ಯಾರ್ಥಿಗಳಿಗೆ ಪಾಠ
ದಾವಣಗೆರೆ.ಅ.6: ನಗರದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕರೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಶಾಲೆಯಲ್ಲಿ ಕೇವಲ ೨ ಕೊಠಡಿಗಳಿದ್ದು,ಒಂದು ಕೊಠಡಿಯಲ್ಲಿ ಉರ್ದು ಶಾಲೆ ನಡೆಯುತ್ತಿದೆ.ಮತ್ತೊಂದು ಕೊಠಡಿಯಲ್ಲಿ ೧ರಿಂದ ೩ನೇ ತರಗತಿಯ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.ಇದರಿಂದ ನಾಲ್ಕು ಮತ್ತು ಐದನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಯೇ ಇಲ್ಲದಂತಾಗಿದ್ದು, ಶಾಲೆಯ ಹೊರಾಂಗಣದಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಸಿಲು ಮತ್ತು ಮಳೆಯನ್ನೂ ಲೆಕ್ಕಿಸದೆ ವಿದ್ಯಾರ್ಥಿಗಳು ಹೊರಗೆ ಕುಳಿತು ಶಿಕ್ಷಣ ಪಡೆಯಬೇಕಾಗಿದೆ. ಒಂದೇ ಕೊಠಡಿಯಲ್ಲಿ ಹಲವು ತರಗತಿಗಳ ಮಕ್ಕಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆ ಶಿಕ್ಷಕರಿಗೂ ಎದುರಾಗಿದೆ.ಇದಲ್ಲದೆ, ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆಯೂ ಇಲ್ಲ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಯಲನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಸಮೀಪದಲ್ಲೇ ಸರ್ಕಾರಿ ಜಾಗ ಲಭ್ಯವಿದ್ದರೂ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ನಗರಕ್ಕೆ ಸಮೀಪದಲ್ಲೇ ಇರುವ ಶಾಲೆಯೊಂದರಲ್ಲಿ ಮಕ್ಕಳಿಗೆ ಕನಿಷ್ಠ ಮೂಲಸೌಕರ್ಯವೂ ಇಲ್ಲದಿರುವುದು ಶಿಕ್ಷಣ ವ್ಯವಸ್ಥೆಯ ದುಸ್ಥಿತಿಗೆ ಸಾಕ್ಷಿಯಾಗಿದೆ. ಕೂಡಲೇ ಶಾಲೆಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿಗಳು ಹಾಗೂ ಶೌಚಾಲಯ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
