
ಪ್ರೀತಿಸಿ ಮದುವೆಯಾದ ಯುವತಿ ನೇಣಿಗೆ ಶರಣು..!
ಯಾದಗಿರಿ.ಅ.6-ಮನೆಯವರ ವಿರೋಧದ ನಡುವೆಯೂ ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗಿದ್ದ ೨೦ ವರ್ಷದ ಯುವತಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಸುರಪುರ ತಾಲೂಕಿನ ಎವೂರು ಸಣ್ಣ ತಾಂಡಾದಲ್ಲಿ ನಡೆದಿದೆ.
ಮೃತರನ್ನು ಕವಿತಾ ರಾಥೋಡ್ (೨೦) ಎಂದು ಗುರುತಿಸಲಾಗಿದೆ. ಎವೂರು ಸಣ್ಣ ತಾಂಡಾದ ಸುನಿಲ್ ಜಾದವ್ ಎಂಬ ಯುವಕನನ್ನು ಪ್ರೀತಿಸಿದ್ದ ಕವಿತಾ, ಕುಟುಂಬದ ವಿರೋಧದ ನಡುವೆಯೂ ೨೦೨೫ರಲ್ಲಿ ಆತನನ್ನು ವಿವಾಹವಾಗಿದ್ದರು ಎನ್ನಲಾಗಿದೆ. ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲೇ ದುರಂತ ಸಂಭವಿಸಿದೆ.
ಕವಿತಾಗೆ ಪತಿ ಹಾಗೂ ಅತ್ತೆಯಿಂದ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.ಅಲ್ಲದೆ,ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ, ಇದು ಆತ್ಮಹತ್ಯೆಯಲ್ಲ ಎಂದು ಆರೋಪಿಸಿರುವ ಕುಟುಂಬಸ್ಥರು, ಪ್ರಕರಣದ ಸಮಗ್ರ ತನಿಖೆ ನಡೆಸಿ ಮಗಳ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕವಿತಾ ಸಾವಿನ ಹಿನ್ನೆಲೆಯಲ್ಲಿ ಕಿರುಕುಳದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.
