LatestTop Storiesಬೆಂಗಳೂರು-Bengaluru

ಕನ್ನಡಿಗ ನೌಕರರಿಗೆ ಹಿಂದಿ ಕಲಿಯುವಂತೆ ಒತ್ತಾಯ :ವಿಡಿಯೋ ವೈರಲ್..!

ಬೆಂಗಳೂರು.ಅ.5-ನಗರದ ಖಾಸಗಿ ಕಂಪನಿಯೊಂದರಲ್ಲಿ ಕನ್ನಡಿಗ ನೌಕರರ ಮೇಲೆ ಪರಭಾಷಿಕ ಉದ್ಯೋಗಿಯೊಬ್ಬರು ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕನ್ನಡಿಗ ನೌಕರರೊಂದಿಗೆ ಮಾತನಾಡುವ ವೇಳೆ,ಕೆಲಸ ಮಾಡಬೇಕಾದರೆ ಹಿಂದಿ ಕಲಿಯಬೇಕು. ಇಲ್ಲವಾದರೆ ಕೆಲಸ ಬಿಟ್ಟು ಹೋಗಬಹುದು ಎಂಬ ರೀತಿಯಲ್ಲಿ ವ್ಯಕ್ತಿಯೊಬ್ಬರು ಮಾತನಾಡಿರುವುದು ಕಂಡುಬಂದಿದೆ.

ಕನ್ನಡದಲ್ಲಿ ಮಾತನಾಡುವಂತೆ ನೌಕರರು ಮನವಿ ಮಾಡಿದಾಗ,ನನಗೆ ಕನ್ನಡ ಬರುವುದಿಲ್ಲ. ನಾನು ಹಿಂದಿಯಲ್ಲೇ ಮಾತನಾಡುತ್ತೇನೆ ಎಂದು ಅವರು ಪ್ರತಿಕ್ರಿಯಿಸಿರುವುದು ವಿಡಿಯೋದಲ್ಲಿದೆ.ಅಲ್ಲದೆ,ನಮ್ಮ ಬಳಿ ಕೆಲಸವಿದೆ.ನಿಮಗೆ ಇಷ್ಟವಿಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂಬ ರೀತಿಯ ಮಾತುಗಳನ್ನೂ ಆಡಿದ್ದಾರೆ.

ಕರ್ನಾಟಕದಲ್ಲಿರುವ ಉದ್ಯೋಗ ಸ್ಥಳದಲ್ಲಿ ಕನ್ನಡ ಭಾಷೆಗೆ ಗೌರವ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕನ್ನಡಿಗ ನೌಕರರನ್ನು ಭಾಷೆಯ ಆಧಾರದಲ್ಲಿ ಅವಮಾನಿಸಲಾಗಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ.

ವಿಡಿಯೋ ವೈರಲ್ ಬೆನ್ನಲ್ಲೇ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಆರೋಪದ ಕುರಿತು ಸಂಬಂಧಪಟ್ಟ ಉದ್ಯೋಗಿ ಹಾಗೂ ಕಂಪನಿ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share with Friends
author avatar
Digital Desk