
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ..!
ವಿಜಯಪುರ.ಸೆ.30- ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಇಂದು ನಸುಕಿನ 2.04ರ ಸುಮಾರಿಗೆ ಮತ್ತೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ.
ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನೀಡಿರುವ ಮಾಹಿತಿಯಂತೆ, ಬಸವನ ಬಾಗೇವಾಡಿ ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ಸುಮಾರು 3.9 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಗುರುತಿಸಲಾಗಿದೆ. ಭೂಮಿಯಿಂದ ಸುಮಾರು 10 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ.
ಇದಕ್ಕೂ ಮೊದಲು ಸೋಮವಾರ ಮಧ್ಯರಾತ್ರಿ 12.26ರ ಸುಮಾರಿಗೆ ತಾಲ್ಲೂಕಿನ ದಿಂಡಿವಾರ ಗ್ರಾಮ ಪಂಚಾಯಿತಿ ಕಚೇರಿಯಿಂದ ಸುಮಾರು 1.1 ಕಿ.ಮೀ ನೈಋತ್ಯ ದಿಕ್ಕಿನಲ್ಲಿ, 10 ಕಿ.ಮೀ ಆಳದಲ್ಲಿ 3.5 ತೀವ್ರತೆಯ ಲಘು ಭೂಕಂಪನ ಸಂಭವಿಸಿತ್ತು.
ಅದೇ ರೀತಿ ಸೆಪ್ಟೆಂಬರ್ 17ರಂದು ನಸುಕಿನ 5.30ರ ಸುಮಾರಿಗೆ ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೀಪ 3.7 ತೀವ್ರತೆಯ ಭೂಕಂಪನ ದಾಖಲಾಗಿತ್ತು.ಒಂದೇ ತಿಂಗಳಲ್ಲಿ ತಾಲ್ಲೂಕಿನಲ್ಲಿ ಮೂರು ಬಾರಿ ಭೂಮಿ ಕಂಪಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ತಜ್ಞರ ಅಧ್ಯಯನಕ್ಕೆ ಒತ್ತಾಯ:
ತಾಲ್ಲೂಕಿನಲ್ಲಿ ಪದೇಪದೇ ಭೂಕಂಪನ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಭೂಕಂಪ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಭೂಕಂಪನಗಳಿಗೆ ಕಾರಣವೇನು, ಮುಂದಿನ ದಿನಗಳಲ್ಲಿ ಇಂತಹ ಕಂಪನಗಳ ಸಾಧ್ಯತೆ ಇದೆಯೇ ಎಂಬುದರ ಕುರಿತು ತಜ್ಞರು ಸ್ಪಷ್ಟ ಮಾಹಿತಿ ನೀಡಬೇಕು. ಈ ಮೂಲಕ ಸಾರ್ವಜನಿಕರಲ್ಲಿರುವ ಆತಂಕವನ್ನು ನಿವಾರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
