LatestTop Storiesಬೆಂಗಳೂರು-Bengaluru

ಸಿಲಿಕಾನ್ ಸಿಟಿಯಲ್ಲಿ ಬೆಳಂಬೆಳಗ್ಗೆ ಘರ್ಜಿಸಿದ ಜೆಸಿಬಿ

ಬೆಂಗಳೂರು.ಸೆ.29 – ಬೆಂಗಳೂರಿನ ಲಗ್ಗೇರಿಯ ಜಯ ಭುವನೇಶ್ವರಿ ನಗರದಲ್ಲಿರುವ ಸ್ಲಮ್ ಬೋರ್ಡ್ ಪ್ರದೇಶದಲ್ಲಿ ಬೆಳಂಬೆಳಗ್ಗೆ ಜೆಸಿಬಿ ಕಾರ್ಯಾಚರಣೆ ನಡೆದಿದ್ದು, ಕೆಲವು ಶೆಡ್‌ಗಳನ್ನು ನೆಲಸಮಗೊಳಿಸಲಾಗಿದೆ.

ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಕಾರಣ ನೀಡಿ ಸ್ಲಮ್ ಬೋರ್ಡ್ ಅಧಿಕಾರಿಗಳು ಶೆಡ್‌ಗಳನ್ನು ನೆಲಸಮಗೊಳಿಸಿದ್ದಾರೆ.ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಜೆಸಿಬಿ ತಂದು ಶೆಡ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಲಮ್ ಬೋರ್ಡ್ನ ಎಇ ಪವನ್ ನೇತೃತ್ವದಲ್ಲಿ ಡೆಮಾಲಿಷನ್ ಕಾರ್ಯಾಚರಣೆ ನಡೆದಿದ್ದು, ಕಾರ್ಯಾಚರಣೆ ವೇಳೆ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.

ಶೆಡ್ ನೆಲಸಮ ಮಾಡುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅಂಬೇಡ್ಕರ್ ಭಾವಚಿತ್ರವನ್ನು ರಸ್ತೆಯ ಮಧ್ಯಭಾಗದಲ್ಲಿ ಇಡಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ವೇಳೆ ಶವಪೆಟ್ಟಿಗೆಯೊಂದಕ್ಕೂ ಹಾನಿಯಾಗಿದೆ.

ಡೆಮಾಲಿಷನ್‌ಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಹೇಳದೇ ಕೇಳದೇ ಏಕೆ ನೆಲಸಮ ಮಾಡುತ್ತಿದ್ದೀರಿ? ಎಂದು ಸ್ಥಳೀಯರು ಪ್ರಶ್ನಿಸಿದಾಗ, ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಗೆ ಬಂದಿದ್ದ ಕೆಲವು ಅಧಿಕಾರಿಗಳು ಗುರುತಿನ ಚೀಟಿ ಧರಿಸಿರಲಿಲ್ಲ ಎಂದು ಸ್ಥಳೀಯರು ಪ್ರಶ್ನಿಸಿದ್ದು,ಇದಕ್ಕೆ ಆಫೀಸ್‌ನಲ್ಲಿ ಮಾತ್ರ ಐಡಿ ಕಾರ್ಡ್ ಧರಿಸುತ್ತೇವೆ ಎಂಬ ಉತ್ತರ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಶೆಡ್ ತೆರವುಗೊಳಿಸುವ ಕಾರಣದ ಕುರಿತು ಪ್ರಶ್ನಿಸಿದಾಗಲೂ ಮೇಲಾಧಿಕಾರಿಗಳನ್ನು ಸಂಪರ್ಕಿಸುವಂತೆ ಅಧಿಕಾರಿಗಳು ಉತ್ತರಿಸಿದ ಹಿನ್ನೆಲೆಯಲ್ಲಿ ಇದರಿಂದ ಸ್ಥಳೀಯರಲ್ಲಿ ಮತ್ತಷ್ಟು ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಸ್ಥಳೀಯರ ತೀವ್ರ ವಿರೋಧದ ಬಳಿಕ ಅಧಿಕಾರಿಗಳು ಸ್ಥಳದಿಂದ ತೆರಳಿದ್ದಾರೆ.

Share with Friends
author avatar
Digital Desk