
ಬೆಂಗಳೂರಿನಲ್ಲಿ ಹೆಚ್1ಎನ್1 ಪ್ರಕರಣಗಳ ಹೆಚ್ಚಳ
ಬೆಂಗಳೂರು.ಸೆ.28- ರಾಜಧಾನಿ ಬೆಂಗಳೂರಿನಲ್ಲಿ ಹೆಚ್1ಎನ್1 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್1ಎನ್1 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿರುವುದರಿಂದ ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಹೆಚ್1ಎನ್1 ಹೊಸ ವೈರಸ್ ಅಲ್ಲ.ಪ್ರಸ್ತುತ ಕಾಣಿಸಿಕೊಳ್ಳುತ್ತಿರುವುದು ಸೀಸನಲ್ ಹೆಚ್1ಎನ್1 ಸ್ಟ್ರೈನ್ ಎಂದು ತಜ್ಞರು ತಿಳಿಸಿದ್ದಾರೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಈ ಸೋಂಕಿನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ದಿಢೀರ್ ಜ್ವರ, ಗಂಟಲು ನೋವು, ಮೈಕೈ ನೋವು, ಕೆಮ್ಮು ಮತ್ತು ಸುಸ್ತು ಹೆಚ್1ಎನ್1 ನ ಸಾಮಾನ್ಯ ಲಕ್ಷಣಗಳಾಗಿವೆ. ಕೆಲವರಲ್ಲಿ ವಾಂತಿ ಹಾಗೂ ಭೇದಿಯಂತಹ ಲಕ್ಷಣಗಳೂ ಕಾಣಿಸಿಕೊಳ್ಳಬಹುದು. ಒಂದೇ ಕುಟುಂಬದ ಹಲವು ಸದಸ್ಯರಿಗೆ ಸತತವಾಗಿ ಜ್ವರ ಕಾಣಿಸಿಕೊಂಡು ದಿನಗಟ್ಟಲೆ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿದೆ.
ಎಲ್ಲಾ ಜ್ವರದ ಪ್ರಕರಣಗಳೂ ಹೆಚ್1ಎನ್1 ಆಗಿರುವುದಿಲ್ಲ. ಡೆಂಗ್ಯೂ, ಚಿಕೂನ್‌ಗುನ್ಯಾ ಹಾಗೂ ಮಲೇರಿಯಾದಂತಹ ಕಾಯಿಲೆಗಳೂ ಜ್ವರಕ್ಕೆ ಕಾರಣವಾಗಬಹುದು. ಹೀಗಾಗಿ ವೈದ್ಯರ ಸಲಹೆಯಿಲ್ಲದೆ ಸ್ವಯಂ ಔಷಧಿ, ವಿಶೇಷವಾಗಿ ಆಂಟಿಬಯೋಟಿಕ್ಸ್ ಸೇವಿಸುವುದು ಸೂಕ್ತವಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸೋಂಕು ಹರಡುವುದನ್ನು ತಡೆಯಲು ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ತೊಳೆಯುವುದು, ಅಗತ್ಯವಿದ್ದಲ್ಲಿ ಮಾಸ್ಕ್ ಧರಿಸುವುದು ಹಾಗೂ ಅನಾರೋಗ್ಯದವರೊಂದಿಗೆ ನಿಕಟ ಸಂಪರ್ಕ ತಪ್ಪಿಸುವಂತೆ ಸಲಹೆ ನೀಡಲಾಗಿದೆ.
ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಮಧುಮೇಹ, ಆಸ್ತಮಾ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
