
ಹಾಲಿನ ದರ ಏರಿಕೆಗೆ ಹೋಟೆಲು ಸಂಘ ವಿರೋಧ
ಬೆಂಗಳೂರು.ಸೆ.27- ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 8ರಿಂದ 10ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಬೆಂಗಳೂರು ಹೋಟೆಲುಗಳ ಸಂಘ ವಿರೋಧ ವ್ಯಕ್ತಪಡಿಸಿದೆ. ದರ ಏರಿಕೆ ಅನಿವಾರ್ಯವಾದರೂ, ಹೆಚ್ಚಳದ ಪ್ರಮಾಣವನ್ನು 2ರಿಂದ 3ಕ್ಕೆ ಸೀಮಿತಗೊಳಿಸುವಂತೆ ಸಂಘ ಮನವಿ ಮಾಡಿದೆ.
ಹಾಲಿನ ದರದಲ್ಲಿ 8-10ರಷ್ಟು ಏಕಾಏಕಿ ಏರಿಕೆ ಮಾಡಿದರೆ ಹೋಟೆಲ್, ರೆಸ್ಟೋರೆಂಟ್, ಬೇಕರಿ, ಸಿಹಿತಿಂಡಿ ಹಾಗೂ ಐಸ್ಕ್ರೀಮ್ ಉದ್ಯಮಗಳ ಮೇಲೆ ಹೆಚ್ಚುವರಿ ವೆಚ್ಚದ ಹೊರೆ ಬೀಳಲಿದೆ ಎಂದು ಸಂಘ ತಿಳಿಸಿದೆ.
ಹಾಲಿನ ದರ ಹೆಚ್ಚಳದಿಂದ ಕಾಫಿ, ಟೀ ಸೇರಿದಂತೆ ಹಾಲು ಆಧಾರಿತ ಆಹಾರ ಮತ್ತು ಪಾನೀಯಗಳ ಬೆಲೆಯನ್ನೂ ಹೆಚ್ಚಿಸುವ ಅನಿವಾರ್ಯತೆ ಎದುರಾಗಲಿದೆ.ಇದರ ನೇರ ಹೊರೆ ಗ್ರಾಹಕರ ಮೇಲೆ ಬೀಳುವ ಸಾಧ್ಯತೆಯಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.
ದರದಲ್ಲಿ ಹೆಚ್ಚಿನ ಪ್ರಮಾಣದ ಏರಿಕೆ ಮಾಡಿದರೆ ಹೊರ ರಾಜ್ಯಗಳಿಂದ ಪೂರೈಕೆಯಾಗುವ ಹಾಲಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದ್ದು,ಇದರಿಂದ ನಂದಿನಿ ಹಾಲಿನ ಬಳಕೆಯ ಮೇಲೂ ಪರಿಣಾಮ ಬೀರಬಹುದು ಎಂದು ಸಂಘ ಹೇಳಿದೆ.
2-3ರಷ್ಟು ಸೀಮಿತ ದರ ಏರಿಕೆ ಮಾಡಿದರೆ ಅದರ ಹೆಚ್ಚುವರಿ ಭಾರವನ್ನು ಗ್ರಾಹಕರ ಮೇಲೆ ಹಾಕುವ ಅಗತ್ಯ ಇರುವುದಿಲ್ಲ. ಹೈನುಗಾರರ ಹೆಚ್ಚುವರಿ ಉತ್ಪಾದನಾ ವೆಚ್ಚವನ್ನು ಸರ್ಕಾರ ಅನುದಾನ ಅಥವಾ ಇತರ ಬೆಂಬಲ ಕ್ರಮಗಳ ಮೂಲಕ ಭರಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಶುಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಸಿ. ಪುಟ್ಟರಂಗಶೆಟ್ಟಿ ಹಾಗೂ ಕೆಎಂಎಫ್ ನಿರ್ದೇಶಕರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಸುಬ್ರಮಣ್ಯ ಹೊಳ್ಳ ಎಸ್. ಹಾಗೂ ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಮನವಿಗೆ ಸಹಿ ಮಾಡಿದ್ದಾರೆ
