
ಮಾಫಿ ಸಾಕ್ಷಿ ಪ್ರದೂಷ್‌ಗೆ ಜೈಲಿನಲ್ಲಿ ಬಿಗಿ ಭದ್ರತೆ
ಬೆಂಗಳೂರು.ಸೆ.25- ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೂಷ್‌ಗೆ ಜೈಲಿನಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಂಡಿದ್ದಾರೆ.
ಪ್ರದೂಷ್ ಇರುವ ಸೆಲ್ ಮೇಲೆ ೨೪ ಗಂಟೆಯೂ ಸಿಸಿಟಿವಿ ಕಣ್ಗಾವಲು ಇರಿಸಲಾಗಿದ್ದು, ಅವರ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಮಾಫಿ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಅವರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಪ್ರದೂಷ್‌ಗೆ ಹೊರಗಿನಿಂದ ಬರುವ ಊಟ, ತಿಂಡಿ ಹಾಗೂ ನೀರಿನ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಅವರನ್ನು ಭೇಟಿಯಾಗಲು ಜೈಲಿಗೆ ಬರುವ ವ್ಯಕ್ತಿಗಳ ವಿವರಗಳನ್ನು ಸಂಪೂರ್ಣವಾಗಿ ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ.
ಪ್ರದೂಷ್ ಭದ್ರತೆಗೆ ಸಂಬಂಧಿಸಿದಂತೆ ಜೈಲಿನ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜೈಲಿನೊಳಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣು ಇರಿಸಲಾಗಿದೆ.
