LatestTop Storiesಜಿಲ್ಲಾ ಸುದ್ದಿಗಳು | District Newsತುಮಕೂರು-Tumakuru

ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ:

ತುಮಕೂರುಸೆ.23- ತುಮಕೂರುಜಿಲ್ಲೆಯ ತಿಪಟೂರಿನಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಧೋರಣೆ ವಿರುದ್ಧ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಎತ್ತಿನಹೊಳೆ ಯೋಜನೆಗೆ ಭೂಮಿ ಕಳೆದುಕೊಂಡ ಬಡ ಹಾಗೂ ದಲಿತ ರೈತರಿಗೆ ಜಮೀನು ದುರಸ್ತಿಗೆ ಬೇಕಾದ ನಿರಾಕ್ಷೇಪಣಾ ಪತ್ರ (NOC) ನೀಡದೆ ಸತಾಯಿಸುತ್ತಿರುವ ಅರಣ್ಯ ಇಲಾಖೆ ವಿರುದ್ಧ ತಾಲೂಕು ವಲಯ ಅರಣ್ಯ ಕಚೇರಿ ಎದುರು ಬೃಹತ್ ಧರಣಿ ನಡೆಸಿದ್ದಾರೆ.

ಸ್ಥಳೀಯ ವಲಯ ಅರಣ್ಯಾಧಿಕಾರಿ ವಿರುದ್ಧ ರೈತರು ಹಿಡಿಶಾಪ ಹಾಕಿ ಪ್ರತಿಭಟಿಸಿದರು.ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗಾಗಿ ತಿಪಟೂರು ತಾಲೂಕಿನ ಯಗಚಿಘಟ್ಟ ಹಾಗೂ ಬಿದರೆಗುಡಿ ಕಾವಲ್ ವ್ಯಾಪ್ತಿಯ ಬಡ ಮತ್ತು ದಲಿತ ರೈತರ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ.

ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಸಿಗಬೇಕಾದರೆ ಹಾಗೂ ಜಮೀನು ದುರಸ್ತು ಕಾರ್ಯ ಪೂರ್ಣಗೊಳ್ಳಬೇಕಾದರೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯುವುದು ಕಡ್ಡಾಯವಾಗಿದೆ.

ಆದರೆ, ತಿಪಟೂರು ವಲಯ ಅರಣ್ಯ ಕಚೇರಿಯ ಅಧಿಕಾರಿಗಳು ತಿಂಗಳುಗಳಿಂದ ಎನ್‌ಒಸಿ ನೀಡದೆ ಬಡ ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಮಧು ಅವರು ಅರ್ಜಿದಾರರನ್ನು ಪ್ರತಿದಿನ ಕಚೇರಿಗೆ ಅಲೆದಾಡಿಸುತ್ತಿದ್ದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಮುಖಂಡರು ನೇರ ಆರೋಪ ಮಾಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಕಚೇರಿ ಆವರಣದಲ್ಲೇ ‘ಗೋ ಬ್ಯಾಕ್ ಮಧು’ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ತಕ್ಷಣವೇ ಅರಣ್ಯ ಇಲಾಖೆಯು ರೈತರ ಸಮಸ್ಯೆ ಆಲಿಸಿ, ವಿಳಂಬವಿಲ್ಲದೆ ಎನ್‌ಒಸಿ ವಿತರಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಕೊಪ್ಪ ಶಾಂತಪ್ಪ, ಗ್ರಾ.ಪಂ. ಮಾಜಿ ಸದಸ್ಯ ಹರೀಶ್‌ಗೌಡ ಮತ್ತಿಹಳ್ಳಿ, ದಲಿತ ಸಂಘರ್ಷ ಸಮಿತಿ ಮುಖಂಡ ಕುಪ್ಪಾಳು ರಂಗಸ್ವಾಮಿ, ಗಾಂಧಿನಗರ ಬಸವರಾಜು, ಮಹೇಂದ್ರ, ಬಿಳಿಗೆರೆ ಚಂದ್ರಶೇಖರ್, ರಮೇಶ್ ಸೇರಿದಂತೆ ನೂರಾರು ರೈತರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.

Share with Friends
author avatar
Digital Desk