LatestTop Storiesಜಿಲ್ಲಾ ಸುದ್ದಿಗಳು | District Newsಬೆಂಗಳೂರು-Bengaluru

ನಾಗವಾರ -ಟ್ಯಾನರಿ ರೋಡ್‌ನಲ್ಲಿ ವೈ-ಟಾಪಿಂಗ್ ಕಾಮಗಾರಿ: ವಾಹನ ಸವಾರರ ಪರದಾಟ

ಬೆಂಗಳೂರು.ಸೆ.22- ಬೆಂಗಳೂರಿನ ನಾಗವಾರ ಮುಖ್ಯ ರಸ್ತೆ ಟ್ಯಾನರಿ ರೋಡ್‌ನ ಕೆ.ಜಿ.ಹಳ್ಳಿಯಲ್ಲಿ ನಡೆಯುತ್ತಿರುವ ವೈ-ಟಾಪಿಂಗ್ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪ್ರತಿನಿತ್ಯ ವಾಹನ ಸವಾರರು ತೀವ್ರ ಸಂಚಾರ ದಟ್ಟಣೆ ಎದುರಿಸುವಂತಾಗಿದೆ.

ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸಮರ್ಪಕವಾಗಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸದಿದ್ದರೆ, ಗಂಟೆಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಎರಡು ಬಿಎಂಟಿಸಿ ಬಸ್‌ಗಳು ಏಕಕಾಲದಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಎರಡೂ ಬದಿಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿ, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ಕೂಡ ನಡೆದಿದೆ. ಈ ವೇಳೆ ಬಸ್ ಸಿಬ್ಬಂದಿ, ವಾಹನ ಸವಾರರು ಹಾಗೂ ಟ್ರಾಫಿಕ್ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ವಿಶೇಷವಾಗಿ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌ಗಳ ಸಂಚಾರದ ಕುರಿತು ಸಾರ್ವಜನಿಕರಿಂದ ಹಲವು ಆರೋಪಗಳು ಕೇಳಿಬರುತ್ತಿವೆ. ಕೆಲವು ಚಾಲಕರ ಚಾಲನಾ ಕೌಶಲ್ಯದ ಬಗ್ಗೆಯೂ ಸಾರ್ವಜನಿಕರು ಪ್ರಶ್ನೆಗಳನ್ನು ಎತ್ತಿದ್ದಾರೆ. ಎಲೆಕ್ಟ್ರಿಕ್ ಬಸ್‌ಗಳ ಚಾಲಕರ ವಿರುದ್ಧ ಒಂದಲ್ಲ ಒಂದು ರೀತಿಯ ಆರೋಪಗಳು ಕೇಳಿಬರುತ್ತಿರುವುದಾಗಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಮತ್ತು ಸಂಚಾರ ದಟ್ಟಣೆಯಿಂದಾಗಿ ಕೆಲ ಸಮಯ ಗಂಟೆಗಟ್ಟಲೆ ವಾಹನಗಳು ಸಿಲುಕಿಕೊಳ್ಳುತ್ತಿದ್ದು, ಇದರಿಂದ ಬಸ್ ಚಾಲಕರು ಹಾಗೂ ವಾಹನ ಸವಾರರ ನಡುವೆ ಆಕ್ರೋಶದ ವಾತಾವರಣ ನಿರ್ಮಾಣವಾಗುತ್ತಿದೆ.

ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಸಂಚಾರ ನಿರ್ವಹಣೆಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ. ಪ್ರತಿನಿತ್ಯ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೈ-ಟಾಪಿಂಗ್ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದರ ಜೊತೆಗೆ, ಕಾಮಗಾರಿ ಮುಗಿಯುವವರೆಗೆ ಸ್ಥಳದಲ್ಲಿ ಹೆಚ್ಚುವರಿ ಟ್ರಾಫಿಕ್ ಸಿಬ್ಬಂದಿಯನ್ನು ನಿಯೋಜಿಸಿ ಸಂಚಾರ ಸುಗಮಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share with Friends
author avatar
Digital Desk