
ಕರೆಂಟ್ ಸಮಸ್ಯೆಗೆ ಬೇಸತ್ತ ತೋಟಪಟ್ಟೆ ಜನರಿಂದ KEB ಮುಂದೆ ಅನ್ನ ಪ್ರಸಾದ
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಕೆಇಬಿ ಕಚೇರಿ ಮುಂದೆ ವಿಭಿನ್ನ ರೀತಿಯ ಪ್ರತಿಭಟನೆ ನಡೆದಿದೆ.ಉಮರಾಣಿ ಹಾಗೂ ಬೆಳಗಲಿ ಗ್ರಾಮದ ತೋಟಪಟ್ಟೆ ಪ್ರದೇಶದ ಜನರು ನಿರಂತರ ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ ಎನ್ನಲಾಗಿದೆ.
ಗಣೇಶೋತ್ಸವದ ಅಂಗವಾಗಿ ಭಕ್ತರು ಮಹಾ ಪ್ರಸಾದ ಆಯೋಜಿಸಿದ್ದರು. ಆದರೆ ವಿದ್ಯುತ್ ಸಮಸ್ಯೆಯಿಂದ ಮಹಾ ಪ್ರಸಾದ ಸೇವಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಕೆಇಬಿ ಕಚೇರಿ ಮುಂದೆ ಬಂದು ಅನ್ನ ಪ್ರಸಾದ ಸೇವಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದೇ ವೇಳೆ ವಕೀಲ ಪ್ರಶಾಂತ್ ಹುಕ್ಕೇರಿ ಅವರು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತೋಟಪಟ್ಟೆ ಜನರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯುತ್ ಇಲ್ಲದೆ ರೈತರು ಹಾಗೂ ತೋಟಪಟ್ಟೆ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗೆ ಅಧಿಕಾರಿಗಳು ಯಾವಾಗ ಪರಿಹಾರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
