
₹1 ಕೋಟಿ ಲಂಚದ ಡೀಲ್ ಬಯಲು
ಧಾರವಾಡ : ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರು ಜಮೀನಿನ ‘ಅ’ ಖರಾಬ್ ತೆಗೆಯಲು ₹1 ಕೋಟಿ ಹಾಗೂ 1 ಎಕರೆ ಜಮೀನಿಗೆ ಬೇಡಿಕೆ ಇಟ್ಟಿದ್ದರು.
ಮುಂಗಡವಾಗಿ ₹50 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.ಧಾರವಾಡ ಜಿಲ್ಲೆಯಲ್ಲಿ ಲಂಚಾವತಾರಕ್ಕೊಂದು ದೊಡ್ಡ ಸಾಕ್ಷಿ ಸಿಕ್ಕಿದ್ದು,
ಭೂಮಿಯ ‘ಅ’ ಖರಾಬ್ ತೆಗೆದು ಕೊಡುವುದಕ್ಕಾಗಿ ಬೃಹತ್ ಮೊತ್ತದ ಲಂಚದ ಹಣ ಪಡೆಯುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮುಂಗಡವಾಗಿ ₹50 ಲಕ್ಷ ನಗದು ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.ಪ್ರಕರಣದ ವಿವರ ಹಾಗೂ ಹಿನ್ನೆಲೆ! ಬಾಗಲಕೋಟೆ ಜಿಲ್ಲೆ ಮೂಲದ ಮಂಜುನಾಥ್ ಎಂಬ ರಿಯಲ್ ಎಸ್ಟೇಟ್ ಡೆವಲಪರ್, ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಭೂಮಿ ಖರೀದಿಸಿದ್ದರು.
ಈ ಜಮೀನನ್ನು ಡೆವಲಪ್ಮೆಂಟ್ ಮಾಡಲು ಉದ್ದೇಶಿಸಿದ್ದ ಮಂಜುನಾಥ್, ಜಮೀನಿನಲ್ಲಿದ್ದ ‘ಅ’ ಖರಾಬ್ ಭಾಗವನ್ನು ಅಧಿಕೃತವಾಗಿ ತೆಗೆದುಹಾಕಲು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮಾನುಸಾರ ಕೆಲಸ ಮಾಡಿಕೊಡಬೇಕಿದ್ದ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್, ಈ ಕೆಲಸಕ್ಕಾಗಿ ಕಮಿಷನ್ ಬೇಡಿಕೆ ಇಟ್ಟಿದ್ದರು.
ಜಮೀನಿನ ಖರಾಬ್ ತೆಗೆದು ಸರಿಪಡಿಸಿಕೊಡಲು ತಹಶೀಲ್ದಾರ್ ಸಚ್ಚಿದಾನಂದ ಅವರು ಬೃಹತ್ ಮೊತ್ತದ ಆಸೆಗೆ ಬಿದ್ದಿದ್ದರು. ಡೆವಲಪರ್ ಮಂಜುನಾಥ್ ಬಳಿ ಬರೋಬ್ಬರಿ ₹1 ಕೋಟಿ ನಗದು ಹಣ ಹಾಗೂ 1 ಎಕರೆ ಜಮೀನನ್ನು ತಮ್ಮ ಹೆಸರಿಗೆ ನೀಡುವಂತೆ ಕಟ್ಟುನಿಟ್ಟಿನ ಲಂಚದ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಡೆವಲಪರ್ ಮಂಜುನಾಥ್ ಈ ಕುರಿತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
