LatestTop Storiesಜಿಲ್ಲಾ ಸುದ್ದಿಗಳು | District Newsವಿಜಯಪುರ-Vijayapura

ಗಣೇಶೋತ್ಸವ ಸಮಿತಿಗಳ ಮುಖಂಡರು ಭಾಗವಹಿಸಿ ಹಬ್ಬದ ಆಚರಣೆ ಕುರಿತು ಮಹತ್ವದ ಚರ್ಚೆ ನಡೆಸಿದರು

ತಿಪಟೂರು ನಗರದಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವ ನಿಟ್ಟಿನಲ್ಲಿ ಉಪವಿಭಾಗ ಮಟ್ಟದ ಶಾಂತಿ ಸಭೆ ನಡೆಯಿತು.ಶಾಸಕ ಕೆ. ಷಡಕ್ಷರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ತಾಲೂಕು ಆಡಳಿತದ ಪ್ರಮುಖ ಅಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದಾರೆ.

ತಿಪಟೂರಿನಲ್ಲಿ ಗೌರಿ-ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸ್ ಹಾಗೂ ಕಂದಾಯ ಇಲಾಖೆ ವತಿಯಿಂದ ಉಪವಿಭಾಗ ಮಟ್ಟದ ಸೌಹಾರ್ದ ಸಭೆ ಆಯೋಜಿಸಲಾಗಿತ್ತು.

ಗಣೇಶೋತ್ಸವ ಸಮಿತಿಗಳ ಮುಖಂಡರು ಭಾಗವಹಿಸಿ ಹಬ್ಬದ ಆಚರಣೆ ಕುರಿತು ಮಹತ್ವದ ಚರ್ಚೆ ನಡೆಸಿದರು

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ. ಷಡಕ್ಷರಿ ಅವರು, “ತಿಪಟೂರು ಎಂದಿಗೂ ಸೌಹಾರ್ದತೆಗೆ ಹೆಸರುವಾಸಿಯಾದ ಊರು. ಯಾವುದೇ ಧರ್ಮ-ಜಾತಿ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು.ಸಂಘಟಕರು ಕಾನೂನು ನಿಯಮಗಳನ್ನು ಗೌರವಿಸಿ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಬೇಕು” ಎಂದು ಕರೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾತನಾಡಿ, “ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸರಿಂದ ಸೂಕ್ತ ಅನುಮತಿ ಕಡ್ಡಾಯ. ಡಿಜೆ ಬಳಕೆ, ಮೆರವಣಿಗೆಯ ಮಾರ್ಗ ಮತ್ತು ಸಮಯದ ಮಿತಿಯನ್ನು ಸಂಘಟಕರು ಕಟ್ಟುನಿಟ್ಟಾಗಿ ಪಾಲಿಸಬೇಕು.

ಸುಳ್ಳು ವದಂತಿಗಳಿಗೆ ಕಿವಿಗೊಡದೆ ಸಾರ್ವಜನಿಕರು ಶಾಂತಿ ಕಾಪಾಡಬೇಕು; ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಹಾಗೂ ಡಿವೈಎಸ್ಪಿ ಉಮೇಶ್ ಅವರು ಮಾತನಾಡಿ, ಪರಿಸರಸ್ನೇಹಿ ಮಣ್ಣಿನ ಗಣಪತಿಗಳ ಬಳಕೆಗೆ ಒತ್ತು ನೀಡಬೇಕು ಮತ್ತು ವಿಸರ್ಜನಾ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ನಗರಸಭೆ ಪೌರಾಯುಕ್ತ ವಿಶ್ವೇಶ್ವರ್ ಅವರು ಸ್ವಚ್ಛತೆ ಮತ್ತು ಮೂಲಸೌಕರ್ಯ ನಿರ್ವಹಣೆ ಕುರಿತು ವಿವರಣೆ ನೀಡಿದರು.

ಸಭೆಯಲ್ಲಿ ವೃತ್ತ ನಿರೀಕ್ಷಕರಾದ ರವಿ ಕುಮಾರ್, ಚಂದ್ರಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಗಣೇಶ ಮಂಡಳಿಗಳ ಪದಾಧಿಕಾರಿಗಳು ಭಾಗವಹಿಸಿ ಹಬ್ಬವನ್ನು ಸೌಹಾರ್ದಯುತವಾಗಿ ಯಶಸ್ವಿಗೊಳಿಸಲು ಸಹಕಾರ ನೀಡುವುದಾಗಿ ಒಪ್ಪಿಕೊಂಡರು.

Share with Friends
author avatar
Digital Desk