
ಸಂಭ್ರಮದಿಂದ ಈದ್ ಮಿಲಾದ್ ಆಚರಣೆ — ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಬೆಳಗಾವಿ!
ಬೆಳಗಾವಿ ನಗರದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸ್ಮರಣಾರ್ಥ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.ಈ ಹಿನ್ನೆಲೆ ನಗರದ ಪೈಗಂಬರ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಈದ್ ಮಿಲಾದ್ ಆಚರಣೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಮಾಜಿ ಶಾಸಕ ಫಿರೋಜ್ ಸೇಠ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಇದೇ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಅವರು ನಮ್ಮ ಸಂಪೂರ್ಣ ನ್ಯೂಸ್ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದರು.
ಈದ್ ಎಂದರೆ ಸಂತೋಷ, ಮಿಲಾದ್ ಎಂದರೆ ಜನನಕಾಲ.
ಹೀಗಾಗಿ ಈದ್ ಮಿಲಾದ್ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸ್ಮರಣೆಯ ಹಬ್ಬವಾಗಿದೆ. ಈ ಹಬ್ಬವು ದಾನ, ಧರ್ಮ, ಪುಣ್ಯ ಹಾಗೂ ತ್ಯಾಗದ ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ ಎಂದು ಶಾಸಕ ರಾಜು ಸೇಠ್ ಹೇಳಿದರು.
ಅಷ್ಟೇ ಅಲ್ಲ, ಬಡವ–ಬಲ್ಲಿದ, ಶತ್ರು–ಮಿತ್ರ, ಗಂಡು–ಹೆಣ್ಣು ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಸಹೋದರತ್ವ ಹಾಗೂ ಮಾನವೀಯತೆಯಿಂದ ಬದುಕಬೇಕು ಎಂಬ ಸಂದೇಶವನ್ನು ಈದ್ ಮಿಲಾದ್ ಹಬ್ಬ ಸಾರುತ್ತದೆ ಎಂದರು.
ಇನ್ನು ಬೆಳಗಾವಿ ನಗರದಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಯಾವುದೇ ಭೇದಭಾವವಿಲ್ಲದೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಸಾಕ್ಷಿಯಾಯಿತು.ಒಟ್ಟಿನಲ್ಲಿ, ಪ್ರೀತಿ, ಶಾಂತಿ, ಸಹೋದರತ್ವ ಮತ್ತು ಮಾನವೀಯತೆಯ ಸಂದೇಶ ಸಾರಿದ ಈದ್ ಮಿಲಾದ್ ಹಬ್ಬ ಬೆಳಗಾವಿಯಲ್ಲಿ ಸಂಭ್ರಮದಿಂದ ಜರುಗಿತು.
