ಜಿಲ್ಲಾ ಸುದ್ದಿಗಳು | District Newsತುಮಕೂರು-Tumakuru

ತುಮಕೂರಿನಲ್ಲಿ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅನಿರ್ದಿಷ್ಟಾವಧಿ ಧರಣಿ

ತುಮಕೂರು ಬ್ರೇಕಿಂಗ್: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ತುಮಕೂರಿನಲ್ಲಿ ಬಿಜೆಪಿ ಹೋರಾಟ ತೀವ್ರಗೊಳಿಸಿದೆ.

ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಮುಂದುವರಿದಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಈ ವೇಳೆ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಬಿ. ನಾಗೇಂದ್ರ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಗರಣದ ತನಿಖೆ ನಡೆದು ಆರೋಪಪಟ್ಟಿಯೂ ಸಲ್ಲಿಕೆಯಾಗಿದೆ. ಹೀಗಿದ್ದರೂ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಯಾಕೆ? ಸರ್ಕಾರದ ಮೇಲೆ ಅಂತಹ ಒತ್ತಡ ಏನಿತ್ತು ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ ಹಣಕಾಸು ಅವ್ಯವಹಾರದಲ್ಲಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯ ವಿಧಾನಸಭೆ ಅಧಿವೇಶನದ ಒಳಗೂ ಹೊರಗೂ ಈ ವಿಚಾರವನ್ನು ಬಿಜೆಪಿ ತೀವ್ರವಾಗಿ ಪ್ರಸ್ತಾಪಿಸುತ್ತಿದ್ದು, ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದೆ. ತುಮಕೂರಿನಲ್ಲೂ ಬಿಜೆಪಿ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮುಂದುವರಿದಿದೆ.

ಬಿ. ನಾಗೇಂದ್ರ ರಾಜೀನಾಮೆ ನೀಡುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಬಿಜೆಪಿ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Share with Friends
author avatar
News Desk