
ಚೆನ್ನಮ್ಮ ದೇವೇಗೌಡರನ್ನ ನೆನೆದ ಶಾಸಕ ಜಿ.ಟಿ ದೇವೇಗೌಡ ..
ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರಿಗೆ ಸಂತಾಪ ಸೂಚಿಸುವ ವೇಳೆ ಶಾಸಕ ಜಿ.ಟಿ ದೇವೇಗೌಡ ಅವರು ಭಾವುಕರಾಗಿ ನೆನಪಿಸಿಕೊಂಡರು.
ಸಂತಾಪ ಸಲ್ಲಿಕೆ ವೇಳೆ ಮಾತನಾಡಿದ ಜಿಟಿಡಿ, ಚೆನ್ನಮ್ಮ ಅವರು ಆದರ್ಶ ಮಹಿಳೆ. ಪ್ರಧಾನಮಂತ್ರಿ ಹೆಂಡತಿ ಅನ್ನೋದನ್ನೂ ಮರೆತು ಎಲ್ಲರನ್ನೂ ಪ್ರೀತಿಯಿಂದ ಕಾಣ್ತಿದ್ರು. ಅವರು ಯಾರಲ್ಲಿಯೂ ಭೇದಭಾವ ತೋರಿಸಲಿಲ್ಲ ಎಂದು ಹಾಡಿ ಹೊಗಳಿದರು.
ನಾನೂ ಕೂಡ ಅವರ ಸಾಮಾಜಿಕ ಮತ್ತು ರಾಜಕೀಯ ಕಾರ್ಯಗಳಲ್ಲಿ ಭಾಗಿಯಾಗಿದ್ದೇನೆ. ಭಾರಿ ಮಳೆಯ ನಡುವೆಯೂ ಅವರನ್ನು ನೋಡಲು ಸಾಗರೋಪಾದಿಯಲ್ಲಿ ಜನ ಆಗಮಿಸುತ್ತಿದ್ದರು. ಅದು ಅವರ ಮೇಲಿದ್ದ ಜನರ ಪ್ರೀತಿಗೆ ಸಾಕ್ಷಿ ಎಂದು ಜಿಟಿಡಿ ನೆನಪಿಸಿಕೊಂಡರು.
ಈ ವೇಳೆ ಅವರು ದೇವೇಗೌಡರನ್ನ ಮತ್ತು ಚೆನ್ನಮ್ಮ ಅವರಿಬ್ಬರನ್ನೂ ಹಾಡಿ ಹೊಗಳಿದರು. ದೇವೇಗೌಡರು ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದರೂ, ಚೆನ್ನಮ್ಮ ಅವರು ನೆಲದ ಮಟ್ಟದಲ್ಲಿ ಜನರೊಂದಿಗೆ ಬೆರೆಯುತ್ತಿದ್ದರು. ಇಂತಹ ದಂಪತಿಗಳು ಅಪರೂಪ ಎಂದು ಹೇಳಿದರು.
ಚೆನ್ನಮ್ಮ ಅವರ ನಿಧನದಿಂದ ರಾಜ್ಯವೊಂದು ತಾಯಿಯನ್ನು ಕಳೆದುಕೊಂಡಂತಾಗಿದೆ. ಅವರ ಸರಳತೆ ಮತ್ತು ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಲಿ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದರು.
