
ಕುರ್ಕುರೇ ಪಾಕೇಟ್ನಲ್ಲಿ ಗಾಂಜಾ ಚಾಕ್ಲೇಟ್ ಮಾರಾಟ – ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದ್ದ ಖತರ್ನಾಕ್ ಜಾಲ ಪೊಲೀಸರ ಬಲೆಗೆ
ಬೆಳಗಾವಿ : ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಕುರ್ಕುರೇ ಪಾಕೇಟ್ಗಳಲ್ಲೇ ಗಾಂಜಾ ಚಾಕ್ಲೇಟ್ ತುಂಬಿ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಮಾದಕ ವಸ್ತು ಜಾಲವನ್ನು ಉದ್ಯಮಭಾಗ ಪೊಲೀಸರು ಭೇದಿಸಿದ್ದಾರೆ.
ಭೋಲು ಪ್ರಜಾಪತಿ ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ₹54 ಸಾವಿರ ಮೌಲ್ಯದ 6 ಕೆಜಿ ಗಾಂಜಾ ಚಾಕ್ಲೇಟ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಉದ್ಯಮಭಾಗ ಪೊಲೀಸರು ಆರೋಪಿ ಭೋಲು ಪ್ರಜಾಪತಿಯನ್ನು ಬಂಧಿಸಿದರು. ವಿಚಾರಣೆ ವೇಳೆ ಆತ ಕುರ್ಕುರೇ ಪಾಕೇಟ್ಗಳ ಒಳಗೆ ಗಾಂಜಾ ತುಂಬಿದ ಚಾಕ್ಲೇಟ್ಗಳನ್ನು ಸೀಲ್ ಮಾಡಿ, ಸಾಮಾನ್ಯ ತಿಂಡಿ ಪದಾರ್ಥದಂತೆ ಮಾರಾಟ ಮಾಡುತ್ತಿದ್ದ ಎಂದು ಒಪ್ಪಿಕೊಂಡಿದ್ದಾನೆ.
ಪೋಷಕರು ಮತ್ತು ಶಿಕ್ಷಕರಿಗೆ ಅನುಮಾನ ಬಾರದಂತೆ ಈ ತಂತ್ರ ಬಳಸಿ ಕಾಲೇಜು, ಪಿಯು ಕಾಲೇಜುಗಳ ಸುತ್ತಮುತ್ತ ಯುವಕರಿಗೆ ಈ ಮಾದಕ ವಸ್ತುವನ್ನು ಪೂರೈಸುತ್ತಿದ್ದ ಎನ್ನಲಾಗಿದೆ.
₹94 ಸಾವಿರ ಮೌಲ್ಯದ ವಸ್ತು ವಶ
ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡ ವಸ್ತುಗಳ ವಿವರ:
- ಗಾಂಜಾ ಚಾಕ್ಲೇಟ್: 6 ಕೆಜಿ – ಅಂದಾಜು ಮೌಲ್ಯ ₹54,000
- ಸ್ಕೂಟಿ: 1
- ಮೊಬೈಲ್ ಫೋನ್: 1
ಒಟ್ಟು ವಶಪಡಿಸಿಕೊಂಡ ವಸ್ತುಗಳ ಮೌಲ್ಯ: ₹94,000
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆಳಗಾವಿ ಪೊಲೀಸ್ ಕಮಿಷನರ್ ಅವರು, ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನವಹಿಸಬೇಕು ಎಂದು ಮನವಿ ಮಾಡಿದರು.
ಬಂಧಿತ ಆರೋಪಿ ಭೋಲು ಪ್ರಜಾಪತಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.ಈ ಜಾಲಕ್ಕೆ ಇನ್ನೂ ಯಾರು ಯಾರು ಸಹಾಯ ಮಾಡಿದ್ದಾರೆ, ಗಾಂಜಾ ಚಾಕ್ಲೇಟ್ಗಳನ್ನು ಎಲ್ಲಿಂದ ತರಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಮೊಬೈಲ್ ಫೋನ್ನಲ್ಲಿರುವ ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.ಕುರ್ಕುರೇ ಪಾಕೇಟ್ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೋಷಕರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಇಂತಹ ಪ್ರಕರಣಗಳನ್ನು ತಡೆಯಲು ಪೊಲೀಸರು ಶಾಲಾ-ಕಾಲೇಜುಗಳ ಸುತ್ತಮುತ್ತ ಕಟ್ಟುನಿಟ್ಟಿನ ಗಸ್ತು ಹೆಚ್ಚಿಸಿದ್ದಾರೆ.
