LatestTop Storiesಬೆಂಗಳೂರು-Bengaluruರಾಜ್ಯ-Karnataka

GBA ಎಚ್ಚರಿಕೆ: ಖಾಲಿ ನಿವೇಶನ ಸ್ವಚ್ಛವಾಗಿಲ್ಲದಿದ್ದರೆ 1.28 ಲಕ್ಷ ರೂ. ವರೆಗೆ ದಂಡ

ಬೆಂಗಳೂರು: ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ. ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಹಾಗೂ ಕಸ, ತ್ಯಾಜ್ಯ ಮುಕ್ತವಾಗಿ ಇಟ್ಟುಕೊಳ್ಳದ ಮಾಲೀಕರಿಗೆ ಎಚ್ಚರಿಕೆ ನೀಡಿದ್ದ GBA, ಇದೀಗ ನಿವೇಶನದ ಅಳತೆಗೆ ಅನುಗುಣವಾಗಿ ದಂಡವನ್ನು ನಿಗದಿಪಡಿಸುವ ಸಾರ್ವಜನಿಕ ಪ್ರಕಟಣೆಯೊಂದನ್ನು ಹೊರಡಿಸಿದೆ.

ಘನತ್ಯಾಜ್ಯ ನಿರ್ವಹಣಾ ನಿಯಮಗಳು ಮತ್ತು GBAಯ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ನಿವೇಶನ ಮಾಲೀಕರಿಗೆ ಈ ಕ್ರಮದ ಮೂಲಕ ಕಠಿಣ ಸಂದೇಶ ರವಾನಿಸಲಾಗಿದೆ.ಬೆಂಗಳೂರನ್ನು ಸ್ವಚ್ಛ, ಸುಂದರ ಮತ್ತು ವಾಸಯೋಗ್ಯ ನಗರವನ್ನಾಗಿ ಮಾಡುವ ಉದ್ದೇಶದಿಂದ, ಆಗಸ್ಟ್ 2026 ರಲ್ಲಿ “ತ್ಯಾಜ್ಯದಿಂದ ಸ್ವಾತಂತ್ರ್ಯ (Freedom from Waste)” ಅಭಿಯಾನವನ್ನು ಪ್ರಾರಂಭಿಸಲಾಗಿದೆ. GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೊರಡಿಸಿರುವ ಆದೇಶದಲ್ಲಿ, ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಸ್ವಚ್ಛತಾ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಘನತ್ಯಾಜ್ಯ ನಿರ್ವಹಣಾ ಉಪ-ನಿಯಮಗಳು-2020ರ ಉಪ-ನಿಯಮ 18(1)(b) ರ ಪ್ರಕಾರ, ನಗರದಲ್ಲಿರುವ ಖಾಲಿ ನಿವೇಶನಗಳನ್ನು ಸ್ವಚ್ಛ ಮತ್ತು ನೈರ್ಮಲ್ಯಯುತ ಸ್ಥಿತಿಯಲ್ಲಿ ನಿರ್ವಹಿಸುವುದು ಸಂಬಂಧಿತ ನಿವೇಶನ ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಿಂದ ತ್ಯಾಜ್ಯ, ಕಸ, ಮಣ್ಣು ಮತ್ತು ಇತರ ವಸ್ತುಗಳನ್ನು ತೆರವುಗೊಳಿಸಿ, ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ.

ನಗರದಲ್ಲಿರುವ ಎಲ್ಲಾ ಖಾಲಿ ನಿವೇಶನಗಳ ಮಾಲೀಕರು 15.08.2026 ರೊಳಗೆ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಬೇಕು. ತೆರವುಗೊಳಿಸಿದ ತ್ಯಾಜ್ಯವನ್ನು ಮಹಾನಗರ ಪಾಲಿಕೆಯು ಗುರುತಿಸಿರುವ ನಿಗದಿತ 5 ಸ್ಥಳಗಳಲ್ಲಿ ಮಾತ್ರ ವಿಲೇವಾರಿ ಮಾಡಬೇಕು ಎಂದು ರಾವ್ ಅವರು ಸುತ್ತೋಲೆಯ ಮೂಲಕ ತಿಳಿಸಿದ್ದಾರೆ.

ಮುಖ್ಯ ಆಯುಕ್ತರ ಸುತ್ತೋಲೆಯ ಪ್ರಕಾರ, ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸುವ ನಿವೇಶನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.
20x30 ಅಳತೆಯ ನಿವೇಶನಕ್ಕೆ ಕನಿಷ್ಠ 19,200 ರೂ.ನಿಂದ ಹಿಡಿದು ಗರಿಷ್ಠ 1.28 ಲಕ್ಷ ರೂ.ವರೆಗೆ ದಂಡವನ್ನು ನಿಗದಿಪಡಿಸಲಾಗಿದೆ. ನಿವೇಶನದ ಗಾತ್ರ ಹೆಚ್ಚಾದಂತೆ ದಂಡದ ಮೊತ್ತವೂ ಹೆಚ್ಚಾಗಲಿದೆ.

ಡೆಡ್‌ಲೈನ್ ಮೀರಿದ ನಂತರವೂ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದರೆ, GBA ಸ್ವತಃ ಸ್ವಚ್ಛತೆ ಕಾರ್ಯ ಮಾಡಿ ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಿದೆ. ಜೊತೆಗೆ ಕಾನೂನು ಕ್ರಮವೂ ಜರುಗಲಿದೆ.ಸೊಳ್ಳೆಗಳ ಉತ್ಪತ್ತಿ, ಅನಧಿಕೃತ ಕಸ ವಿಲೇವಾರಿ ತಾಣಗಳಾಗುತ್ತಿರುವ ಖಾಲಿ ನಿವೇಶನಗಳಿಂದಾಗಿ ನಗರದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ GBA ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

Share with Friends
author avatar
Digital Desk