LatestTop Storiesರಾಷ್ಟ್ರೀಯ-National

ಡಿಕೆ ಸಹೋದರರ ವಿರುದ್ಧ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ

ರಾಮನಗರ: ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, “ನಮ್ಮ ಜಿಲ್ಲೆಯವರು ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು ಎಂದು ಹೇಳುತ್ತಾರೆ. ಆದರೆ ರೈತರು ಹೋರಾಟ ಆರಂಭಿಸಿದಾಗ ನೀವು ಡಿಸಿಎಂ ಆಗಿದ್ದಿರಿ, ಸಿಎಂ ಆಗಿರಲಿಲ್ಲ ಸ್ವಾಮಿ” ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.

ಕನಕಪುರದಲ್ಲಿ ಜಾಗಕ್ಕೆ ಚಿನ್ನದ ಬೆಲೆ ಬರುತ್ತದೆ ಎಂದು ಹೇಳುವ ಸರ್ಕಾರ, ಮಾಗಡಿ ಕ್ಷೇತ್ರದ ಬಿಡದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಯಾಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಪ್ರಶ್ನಿಸಿದ ಅವರು, “ಪರಿಶೀಲನಾ ಸಮಿತಿ ಮಾಡುತ್ತೇವೆ ಎಂದು ಹೇಳಿ ನಾಲ್ಕು ವಾರಗಳಾಗಿದ್ದರೂ ಸುಮ್ಮನಿದ್ದು, ನಮ್ಮ ಪಾದಯಾತ್ರೆ ಆರಂಭವಾಗುವ ಕೇವಲ ಒಂದು ದಿನ ಮೊದಲು ಸಮಿತಿ ರಚನೆ ಮಾಡಿದ್ದಾರೆ” ಎಂದು ಟೀಕಿಸಿದರು.

ಡಿಕೆ ಸಹೋದರರ ವಿರುದ್ಧ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಮುಂದುವರಿದು ಮಾತನಾಡಿದ ಅವರು, “ರೈತರಿಗೆ ಭೂಸ್ವಾಧೀನದ ಹಣ ಕೊಡಲು ನಿಮ್ಮ ಹತ್ತಿರ 11,000 ಕೋಟಿ ರೂಪಾಯಿ ಇದೆಯಾ? ನಿಮ್ಮ ಜಿಬಿಡಿಎ ಖಾತೆಯಲ್ಲಿ ಹಣವಿದ್ದರೆ ಮೊದಲು ಅದನ್ನು ಸಾರ್ವಜನಿಕರಿಗೆ ತೋರಿಸಿ. ನಿಜವಾಗಿ ಯಾರನ್ನು ಉದ್ಧಾರ ಮಾಡಲು ಈ ಟೌನ್‌ಶಿಪ್ ತರುತ್ತಿದ್ದೀರಿ?” ಎಂದು ನೇರವಾಗಿ ಸವಾಲು ಹಾಕಿದರು.

ಸರ್ಕಾರಕ್ಕೆ ಭಯ ಶುರುವಾಗಿರುವುದರಿಂದಲೇ ನಮ್ಮನ್ನು ಫ್ರೀಡಂ ಪಾರ್ಕ್‌ವರೆಗೆ ಚಲೋ ನಡೆಸಲು ಬಿಡುತ್ತಿಲ್ಲ ಎಂದ ಅವರು, “ನೀವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿದಾಗ ಹಾಗೂ ಪ್ರಧಾನ ಮಂತ್ರಿಗಳ ನಿವಾಸದ ಮುಂದೆ ನಿಮ್ಮ ವಿಪಕ್ಷ ನಾಯಕರು ಪ್ರತಿಭಟನೆ ಮಾಡಿದಾಗ ಅದು ಕಾನೂನು ಉಲ್ಲಂಘನೆ ಆಗಲಿಲ್ಲವೇ?” ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಗೈದರು.

Share with Friends
author avatar
Digital Desk