Top Storiesಬೆಳಗಾವಿ-Belagavi

ರಾಯರೇ ನನ್ನನ್ನು ಹುಡುಗಿಯಿಂದ ಕಾಪಾಡಿ..! ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ರಾಯರಿಗೆ ಪತ್ರ..!

ಬೆಳಗಾವಿ: ಭಕ್ತಿ, ನಂಬಿಕೆ ಮತ್ತು ಹರಕೆಗಳಿಗೆ ಹೆಸರಾದ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಈ ಬಾರಿ ವಿಚಿತ್ರ ಹರಕೆ ಪತ್ರವೊಂದು ಬೆಳಕಿಗೆ ಬಂದಿದೆ. “ರಾಯರೇ ನನ್ನನ್ನು ಈ ಹುಡುಗಿಯಿಂದ ಕಾಪಾಡಿ” ಎಂದು ಬರೆದಿರುವ ಪತ್ರವೊಂದು ಭಕ್ತರಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಈ ಘಟನೆ ನಡೆದಿದೆ. ನಿತ್ಯದಂತೆ ಮಠದ ಸಿಬ್ಬಂದಿ ಹುಂಡಿ ಎಣಿಕೆ ಮಾಡುವಾಗ ಈ ವಿಚಿತ್ರ ಹರಕೆ ಪತ್ರ ಪತ್ತೆಯಾಗಿದೆ.ಭಕ್ತರೊಬ್ಬರು ಕಾಗದದಲ್ಲಿ ತಮ್ಮ ಸಂಕಷ್ಟವನ್ನು ಬರೆದು, ಹುಂಡಿಗೆ ಹಾಕಿದ್ದಾರೆ.

“ಶ್ರೀ ಗುರು ರಾಘವೇಂದ್ರ ಸ್ವಾಮಿಗಳೇ, ನನ್ನನ್ನು ಈ ಹುಡುಗಿಯ ಕಾಟದಿಂದ ಕಾಪಾಡಿ. ಅವಳ ಕಿರುಕುಳ ತಾಳಲಾಗುತ್ತಿಲ್ಲ. ನನಗೆ ಒಳ್ಳೆಯ ಮಾರ್ಗ ತೋರಿಸಿ. ನನ್ನ ಕೋರಿಕೆ ಈಡೇರಿದರೆ ಮತ್ತೆ ಬಂದು ಸೇವೆ ಸಲ್ಲಿಸುತ್ತೇನೆ” ಎಂದು ಪತ್ರದಲ್ಲಿ ಭಕ್ತ ಬರೆದುಕೊಂಡಿದ್ದಾರೆ.ಹುಡುಗಿ ಯಾರು, ಏನು ವಿಚಾರ ಎಂಬುದರ ಬಗ್ಗೆ ಪತ್ರದಲ್ಲಿ ವಿವರವಾಗಿ ಉಲ್ಲೇಖಿಸಿಲ್ಲ. ಆದರೆ ಮನಸ್ಸಿಗೆ ನೋವಾಗಿರುವ ಭಕ್ತ ರಾಯರ ಮೊರೆ ಹೋಗಿರುವುದು ಸ್ಪಷ್ಟವಾಗಿದೆ.

ಹುಂಡಿ ಎಣಿಕೆ ವೇಳೆ ಪತ್ತೆಯಾದ ಈ ವಿಭಿನ್ನ ಹರಕೆ ಪತ್ರ ಈಗ ಮಠಕ್ಕೆ ಬರುವ ಭಕ್ತರಲ್ಲಿ ಕುತೂಹಲ ಹುಟ್ಟಿಸಿದೆ. “ರಾಯರು ಎಲ್ಲರ ಕಷ್ಟಕ್ಕೂ ಸ್ಪಂದಿಸುತ್ತಾರೆ” ಎಂಬ ನಂಬಿಕೆಯಿಂದಲೇ ಭಕ್ತರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನೂ ಸ್ವಾಮಿಗಳ ಮುಂದೆ ಇಡುತ್ತಾರೆ ಎಂದು ಮಠದ ಪ್ರಮುಖರು ಹೇಳಿದರು.ರಾಯರಲ್ಲಿ ಹರಕೆ ಹೊತ್ತ ಭಕ್ತನ ಕೋರಿಕೆ ಈಡೇರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Share with Friends
author avatar
Digital Desk