LatestTop Storiesಬೆಂಗಳೂರು-Bengaluruರಾಜ್ಯ-Karnataka

ಆ.13ರಂದು ಅಖಂಡ ಕರ್ನಾಟಕ ಬಂದ್

ಬೆಂಗಳೂರು, ಜು.31: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ವಾಟಳ್ ನಾಗರಾಜ್, ಸಾ.ರಾ ಗೋವಿಂದ್, ಪ್ರವೀಣ್ ಶೆಟ್ಟಿ, ಶಿವರಾಮೇಗೌಡ, ಕೆ.ಅರ್ ಕುಮಾರ್, ಗಿರೀಶ್ ಗೌಡ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ವಿವಿಧ ಸರ್ಕಾರಿ ನೌಕರರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಸಭೆಯ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್,ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು.ರಾಜ್ಯದಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಬೆಳೆಗಳು ಹಾನಿಗೀಡಾಗಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಆಗಸ್ಟ್ 13 ರಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ರಾಜ್ಯವ್ಯಾಪಿ ಬಂದ್ ನಡೆಯಲಿದ್ದು,ಬೆಂಗಳೂರಿನಲ್ಲಿ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ ವರೆಗೆ ಬೃಹತ್ ಮೆರವಣಿಗೆ ನಡೆಸಿ, ಬಳಿಕ ಬಹಿರಂಗ ಸಭೆ ಹಾಗೂ ಸಿಎಂಗೆ ಮನವಿ ಸಲ್ಲಿಸಲಾಗುವುದು.ರಾಜ್ಯದ ಎಲ್ಲ ತಾಲೂಕು ಕೇಂದ್ರಗಳು ಹಾಗೂ ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಕನ್ನಡ ಒಕ್ಕೂಟಗಳು, ರೈತ ಸಂಘಟನೆಗಳು, ಲಾರಿ ಮಾಲೀಕರ ಸಂಘ, ವಕೀಲರ ಸಂಘ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ಜಲಮಂಡಳಿ ಕನ್ನಡ ಒಕ್ಕೂಟ, ಜಲಮಂಡಳಿ ನೌಕರರ ಸಂಘ, ಓಲಾ-ಊಬರ್ ಚಾಲಕರ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘಗಳು, ಹೋಟೆಲ್ ಮಾಲೀಕರ ಸಂಘ, ಕೈಗಾರಿಕಾ ಒಕ್ಕೂಟಗಳು, ಮಾರುಕಟ್ಟೆ ಸಂಘಗಳು, ರಾಜ್ಯ ಒಕ್ಕಲಿಗರ ಒಕ್ಕೂಟ ಸೇರಿದಂತೆ 80ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಬೆಂಬಲ ನೀಡುವ ಸಾಧ್ಯತೆ ಇದೆ.

ಆಸ್ಪತ್ರೆಗಳು, ಮೆಡಿಕಲ್ ಅಂಗಡಿಗಳು, ಬ್ಯಾಂಕ್‌ಗಳು, ಪೆಟ್ರೋಲ್ ಬಂಕ್‌ಗಳು, ಹಾಲು ಸಾಗಣೆ ವಾಹನಗಳು ಹಾಗೂ ಮೆಟ್ರೋ ಸೇವೆ ಮುಂದುವರಿಯುವ ನಿರೀಕ್ಷೆ ಇದೆ. ಬಿಎಂಟಿಸಿ ಸೇವೆ ಕುರಿತು ಇನ್ನೂ ಸ್ಪಷ್ಟತೆ ಇಲ್ಲ.

ಸಿನಿಮಾ ಮಂದಿರಗಳು, ಮಾಲ್‌ಗಳು, ಆಟೋ ಸೇವೆ, ಮಾರುಕಟ್ಟೆಗಳು, ಬೇಕರಿಗಳು, ಅಂಗಡಿ-ಮುAಗಟ್ಟುಗಳು, ಎಪಿಎಂಸಿ ಮಾರುಕಟ್ಟೆಗಳು, ಶಾಲಾ-ಕಾಲೇಜುಗಳು, ಹೋಟೆಲ್‌ಗಳು, ಬೀದಿ ಬದಿ ವ್ಯಾಪಾರ ಹಾಗೂ ಎಲೆಕ್ಟ್ರಿಕಲ್ ಅಂಗಡಿಗಳು ಬಂದ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಐಟಿ ಕಂಪನಿಗಳು, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಕೆಲವು ಸರ್ಕಾರಿ ನೌಕರರ ಸಂಘಟನೆಗಳ ನಿಲುವು ಇನ್ನೂ ಸ್ಪಷ್ಟವಾಗಿಲ್ಲ.

ರಾಜ್ಯದ ಎಂಟು ದಿಕ್ಕುಗಳಲ್ಲಿ ಮಹಾ ದಿಗ್ಬಂಧನಕ್ಕೆ ಕನ್ನಡ ಸಂಘಟನೆಗಳು ಸಿದ್ಧತೆ ನಡೆಸಿವೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇ, ಮಂಡ್ಯ-ಹಾಸನ, ತುಮಕೂರು-ಮೈಸೂರು, ಚಾಮರಾಜನಗರ-ಈರೋಡ್, ನಂಜನಗೂಡು-ಊಟಿ ರಸ್ತೆ ಸೇರಿದಂತೆ ಹಲವು ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುವ ಯೋಜನೆ ರೂಪಿಸಲಾಗಿದೆ.

ಬೆಂಗಳೂರು-ನೆಲಮಂಗಲ ನವಯುಗ ಟೋಲ್, ದೇವನಹಳ್ಳಿ ವಿಮಾನ ನಿಲ್ದಾಣ ಟೋಲ್, ಕಣಮಿಣಕಿ ಟೋಲ್, ರಾಮನಗರ, ಶ್ರೀರಂಗಪಟ್ಟಣ, ಟಿ. ನರಸೀಪುರ, ಹಾಸನ-ಬೆಂಗಳೂರು ಹೆದ್ದಾರಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

Share with Friends
author avatar
Digital Desk