
ಕಾವೇರಿ ನೀರಿನ ವಿವಾದ: ಆಗಸ್ಟ್ 13 ಕ್ಕೆ ಅಖಂಡ ಕರ್ನಾಟಕ ಬಂದ್ ಕರೆ..!
ಬೆಂಗಳೂರು, ಜು.31: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡ ಸಂಘಟನೆಗಳ ಒಕ್ಕೂಟಕರೆ ನೀಡಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ವಾಟಳ್ ನಾಗರಾಜ್. ಸಾ.ರಾ ಗೋವಿಂದ. ಪ್ರವೀಣ್ ಶೆಟ್ಟಿ.ಶಿವರಾಮೇಗೌಡ.ಕೆ.ಅರ್ ಕುಮಾರ್. ಗಿರೀಶ್ ಗೌಡ ಸೇರಿದಂತೆಸುಮಾರು 80ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ವಿವಿಧ ಸರ್ಕಾರಿ ನೌಕರರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ಸಭೆಯ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಬೆಳೆಗಳು ಹಾನಿಗೀಡಾಗಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಆಗಸ್ಟ್ 13 ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ರಾಜ್ಯವ್ಯಾಪಿ ಬಂದ್ ನಡೆಯಲಿದ್ದು, ಬೆಂಗಳೂರಿನಲ್ಲಿ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ರ್ಯಾಲಿ ನಡೆಸಿ, ಬಳಿಕ ಬಹಿರಂಗ ಸಭೆ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ರಾಜ್ಯದ ಎಲ್ಲ ತಾಲೂಕು ಕೇಂದ್ರಗಳು ಹಾಗೂ ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಕನ್ನಡ ಒಕ್ಕೂಟಗಳು, ರೈತ ಸಂಘಟನೆಗಳು, ಲಾರಿ ಮಾಲೀಕರ ಸಂಘ, ವಕೀಲರ ಸಂಘ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ಜಲಮಂಡಳಿ ಕನ್ನಡ ಒಕ್ಕೂಟ, ಜಲಮಂಡಳಿ ನೌಕರರ ಸಂಘ, ಓಲಾ-ಊಬರ್ ಚಾಲಕರ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘಗಳು, ಹೋಟೆಲ್ ಮಾಲೀಕರ ಸಂಘ, ಕೈಗಾರಿಕಾ ಒಕ್ಕೂಟಗಳು, ಮಾರುಕಟ್ಟೆ ಸಂಘಗಳು, ರಾಜ್ಯ ಒಕ್ಕಲಿಗರ ಒಕ್ಕೂಟ ಸೇರಿದಂತೆ 80ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಬೆಂಬಲ ನೀಡುವ ಸಾಧ್ಯತೆ ಇದೆ.
ಅಗತ್ಯ ಸೇವೆಗಳಿಗೆ ವಿನಾಯಿತಿ:
ಆಸ್ಪತ್ರೆಗಳು, ಮೆಡಿಕಲ್ ಅಂಗಡಿಗಳು, ಬ್ಯಾಂಕ್‌ಗಳು, ಪೆಟ್ರೋಲ್ ಬಂಕ್‌ಗಳು, ಹಾಲು ಸಾಗಣೆ ವಾಹನಗಳು ಹಾಗೂ ಮೆಟ್ರೋ ಸೇವೆ ಮುಂದುವರಿಯುವ ನಿರೀಕ್ಷೆ ಇದೆ. ಬಿಎಂಟಿಸಿ ಸೇವೆ ಕುರಿತು ಇನ್ನೂ ಸ್ಪಷ್ಟತೆ ಇಲ್ಲ.
ಬಂದ್‌ನಿಂದ ಬಾಧಿತವಾಗುವ ಸಾಧ್ಯತೆ ಇರುವ ಸೇವೆಗಳು:
ಸಿನಿಮಾ ಮಂದಿರಗಳು, ಮಾಲ್‌ಗಳು, ಆಟೋ ಸೇವೆ, ಮಾರುಕಟ್ಟೆಗಳು, ಬೇಕರಿಗಳು, ಅಂಗಡಿ-ಮುಂಗಟ್ಟುಗಳು, ಎಪಿಎಂಸಿ ಮಾರುಕಟ್ಟೆಗಳು, ಶಾಲಾ-ಕಾಲೇಜುಗಳು, ಹೋಟೆಲ್‌ಗಳು, ಬೀದಿ ಬದಿ ವ್ಯಾಪಾರ ಹಾಗೂ ಎಲೆಕ್ಟ್ರಿಕಲ್ ಅಂಗಡಿಗಳು ಬಂದ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಐಟಿ ಕಂಪನಿಗಳು, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಕೆಲವು ಸರ್ಕಾರಿ ನೌಕರರ ಸಂಘಟನೆಗಳ ನಿಲುವು ಇನ್ನೂ ಸ್ಪಷ್ಟವಾಗಿಲ್ಲ.
ಹೆದ್ದಾರಿ, ಟೋಲ್‌ಗಳಲ್ಲಿ ಪ್ರತಿಭಟನೆ:
ರಾಜ್ಯದ ಎಂಟು ದಿಕ್ಕುಗಳಲ್ಲಿ ಮಹಾ ದಿಗ್ಬಂಧನಕ್ಕೆ ಕನ್ನಡ ಸಂಘಟನೆಗಳು ಸಿದ್ಧತೆ ನಡೆಸಿವೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಮಂಡ್ಯ-ಹಾಸನ, ತುಮಕೂರು-ಮೈಸೂರು, ಚಾಮರಾಜನಗರ-ಈರೋಡ್, ನಂಜನಗೂಡು-ಊಟಿ ರಸ್ತೆ ಸೇರಿದಂತೆ ಹಲವು ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುವ ಯೋಜನೆ ರೂಪಿಸಲಾಗಿದೆ.
ಬೆಂಗಳೂರು-ನೆಲಮಂಗಲ ನವಯುಗ ಟೋಲ್, ದೇವನಹಳ್ಳಿ ವಿಮಾನ ನಿಲ್ದಾಣ ಟೋಲ್, ಕಣಮಿಣಕಿ ಟೋಲ್, ರಾಮನಗರ, ಶ್ರೀರಂಗಪಟ್ಟಣ, ಟಿ. ನರಸೀಪುರ, ಹಾಸನ-ಬೆಂಗಳೂರು ಹೆದ್ದಾರಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಇನ್ನೂ ಅಗಸ್ಟ್ 13 ರ ಕರ್ನಾಟಕ ಬಂದ ಗೆ ಕರವೇ ಬೆಂಬಲ ಇಲ್ಲ:
ಇನ್ನೊಂದೆಡೆ, ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್‌ಗೆ ತಮ್ಮ ಸಂಘಟನೆಯ ಬೆಂಬಲ ಇಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.
“ವಾಟಾಳ್ ನಾಗರಾಜ್ ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ ಪದೇ ಪದೇ ಬಂದ್ ನಡೆಸುವುದರಿಂದ ಸರ್ಕಾರಕ್ಕೂ ಜನರಿಗೂ ನಷ್ಟವಾಗುತ್ತದೆ. ಈ ಬಾರಿ ಕಾವೇರಿ ಹೋರಾಟವನ್ನು ದೆಹಲಿಗೆ ಕೊಂಡೊಯ್ಯುತ್ತೇವೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಿದ್ದೇವೆ. ಹೊಸ ತಲೆಮಾರಿನ (Gen Z) ಮಾದರಿಯ ಹೋರಾಟ ರೂಪಿಸಲಾಗುವುದು,” ಎಂದು ಅವರು ಹೇಳಿದರು.
ಒಟ್ಟಾರೆ, ಆಗಸ್ಟ್ 13 ರ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಕನ್ನಡ ಸಂಘಟನೆಗಳು ವ್ಯಾಪಕ ಸಿದ್ಧತೆ ನಡೆಸಿದ್ದು, ಸಾರ್ವಜನಿಕರ ಸಹಕಾರ ಕೋರಿವೆ. ಆದರೆ ವಿವಿಧ ಸಂಘಟನೆಗಳ ಭಿನ್ನ ನಿಲುವಿನ ನಡುವೆ ಬಂದ್‌ಗೆ ಎಷ್ಟರ ಮಟ್ಟಿನ ಸ್ಪಂದನೆ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
