Latestಯಾದಗಿರಿ

ಬಡ ಮಕ್ಕಳ ಸಾವಿಗೆ ಸ್ಪಂದಿಸದ ಸರ್ಕಾರ..!

ಯಾದಗಿರಿ : ಯಾದಗಿರಿ ಜಿಲ್ಲೆಯ ಹೃದಯವಿದ್ರಾವಕ ಘಟನೆ ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದೆ. ಒಂದೇ ಕುಟುಂಬದ ನಾಲ್ವರು ಮಕ್ಕಳು ನೀರಿನ ಹೊಂಡಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಪ್ರಕರಣ ನಡೆದು ನಾಲ್ಕು ತಿಂಗಳು ಕಳೆದರೂ, ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರವಾಗಲಿ, ನ್ಯಾಯವಾಗಲಿ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಾರ್ಚ್ 29ರಂದು ನಡೆದ ಈ ದುರಂತದಲ್ಲಿ ಕಿರಣ್ (11), ಬಸಮ್ಮ (12), ಶರತ್ (7) ಹಾಗೂ ಹನಮೇಶ್ (6) ಮೃತಪಟ್ಟಿದ್ದರು. ಯಾರೋ ಅಗೆದು ಬಿಟ್ಟಿದ್ದ ನೀರಿನ ಹೊಂಡಕ್ಕೆ ಬಿದ್ದು ನಾಲ್ವರು ಮಕ್ಕಳು ಸಾವನ್ನಪ್ಪಿದ್ದರು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು.

ಬಡ ಮಕ್ಕಳ ಸಾವಿಗೆ ಸ್ಪಂದಿಸದ ಸರ್ಕಾರ

ಘಟನೆಯ ನಂತರ ಸಚಿವರು, ಶಾಸಕರು, ಸಂಸದರು ಸೇರಿದಂತೆ ಹಲವು ಜನಪ್ರತಿನಿಧಿಗಳು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ಕಲ್ಪಿಸುವ ಭರವಸೆ ನೀಡಲಾಗಿತ್ತು. ಆದರೆ ನಾಲ್ಕು ತಿಂಗಳು ಕಳೆದರೂ ಕುಟುಂಬಕ್ಕೆ ಒಂದು ರೂಪಾಯಿ ಪರಿಹಾರವೂ ದೊರೆತಿಲ್ಲ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ

ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ಸ್ವಂತ ಮನೆಯೂ ಇಲ್ಲ. ಗುಡಿಸಲಿನಲ್ಲಿ ಮಕ್ಕಳ ಫೋಟೋಗಳನ್ನು ನೋಡುತ್ತಲೇ ಕಣ್ಣೀರಿನ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳನ್ನು ಕಳೆದುಕೊಂಡ ನೋವಿನ ನಡುವೆ ಆರ್ಥಿಕ ಸಂಕಷ್ಟವೂ ಅವರನ್ನು ಕಾಡುತ್ತಿದೆ.

ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆಯೇ? ಪರಿಹಾರ ಪ್ರಕ್ರಿಯೆ ಯಾವ ಹಂತದಲ್ಲಿದೆ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಫೋಟೋ ತೆಗೆಸಿಕೊಂಡು ಹೋದರೇ ಹೊರತು, ಬಡ ಕುಟುಂಬದ ಕಣ್ಣೀರಿಗೆ ಸ್ಪಂದಿಸುವ ಕೆಲಸ ನಡೆದಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ರಾಜಕೀಯ ಪಕ್ಷಗಳ ಭೇದವಿಲ್ಲದೆ ಆಡಳಿತ ಪಕ್ಷ, ವಿರೋಧ ಪಕ್ಷದ ನಾಯಕರು ಭೇಟಿ ನೀಡಿದ್ದರೂ ಕುಟುಂಬದ ಬದುಕಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬಡ ಮಕ್ಕಳ ಸಾವಿಗೆ ನ್ಯಾಯ ಸಿಗಬೇಕು, ಸರ್ಕಾರ ತಕ್ಷಣ ಪರಿಹಾರ ಘೋಷಿಸಿ ಕುಟುಂಬದ ನೆರವಿಗೆ ಧಾವಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಈ ದುರ್ಘಟನೆ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೊಂಡ ನಿರ್ಮಾಣಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬಡ ಮಕ್ಕಳ ಸಾವಿಗೆ ನ್ಯಾಯ ದೊರೆಯುವವರೆಗೂ ಈ ವಿಚಾರವನ್ನು ನಿರಂತರವಾಗಿ ಪ್ರಸ್ತಾಪಿಸುವುದಾಗಿ ಸ್ಥಳೀಯರು ಹಾಗೂ ಹೋರಾಟಗಾರರು ತಿಳಿಸಿದ್ದಾರೆ.

Share with Friends
author avatar
Digital Desk