
ಗೃಹಲಕ್ಷ್ಮೀಯರಿಗೆ ಭರ್ಜರಿ ಸಿಹಿ ಸುದ್ದಿ: 31ನೇ ಕಂತಿನ ಹಣ ಬಿಡುಗಡೆ ಮಾಡಿದ ಸರ್ಕಾರ..!
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಗೃಹಲಕ್ಷ್ಮಿ” ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ.ಯೋಜನೆಯ 31ನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಪ್ರಕ್ರಿಯೆ ಚುರುಕಿನಿಂದ ಆರಂಭವಾಗಿದೆ.
2,400 ಕೋಟಿ ರೂ. ಭಾರಿ ಮೊತ್ತ ಬಿಡುಗಡೆ!
ಈ ಕಂತಿಗಾಗಿ ರಾಜ್ಯ ಸರ್ಕಾರ ಬರೋಬ್ಬರಿ 2,400 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದರ ನೇರ ಪ್ರಯೋಜನವನ್ನು ರಾಜ್ಯದ 1,24,48,000 (ಒಂದು ಕೋಟಿ ಇಪ್ಪತ್ತನಾಲ್ಕು ಲಕ್ಷದ ನಲವತ್ತೆಂಟು ಸಾವಿರ) ಕುಟುಂಬದ ಯಜಮಾನಿಯರು ಪಡೆಯಲಿದ್ದಾರೆ.

ಇದುವರೆಗೆ ಪ್ರತಿಯೊಬ್ಬರ ಖಾತೆಗೆ ಸಂದಾಯವಾಗಿದೆ 62,000 ರೂ.!
ಗೃಹಲಕ್ಷ್ಮಿ ಯೋಜನೆ ಜಾರಿಯಾದ ದಿನದಿಂದ ಇಂದಿನವರೆಗೂ ಯಶಸ್ವಿಯಾಗಿ 31 ಕಂತುಗಳನ್ನು ಪೂರೈಸಿದೆ. ಪ್ರತಿ ತಿಂಗಳು ತಲಾ 2,000 ರೂಪಾಯಿಗಳಂತೆ ನಿಯಮಿತವಾಗಿ ಹಣ ಜಮೆಯಾಗುತ್ತಾ ಬಂದಿದ್ದು, ಈ 31 ಕಂತುಗಳ ಮೂಲಕ ಪ್ರತಿಯೊಬ್ಬ ಫಲಾನುಭವಿ ಮಹಿಳೆಯ ಖಾತೆಗೆ ಇದುವರೆಗೆ ಒಟ್ಟು 62,000 ರೂಪಾಯಿ ತಲುಪಿದಂತಾಗಿದೆ.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುವ ಪ್ರಕ್ರಿಯೆ ಈಗಾಗಲೇ ಚಾಲನೆ ಪಡೆದುಕೊಂಡಿದೆ.
ತಾಂತ್ರಿಕ ಕಾರಣಗಳು ಹಾಗೂ ಬ್ಯಾಂಕ್ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮುಂದಿನ 3 ರಿಂದ 4 ದಿನಗಳ ಕಾಲ ಹಂತ-ಹಂತವಾಗಿ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಣ ತಲುಪಲಿದೆ ಎಂದು ಇಲಾಖೆ ತಿಳಿಸಿದೆ
ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆಗೆ ರಾಜ್ಯ ಸರ್ಕಾರ ಇದುವರೆಗೆ ಬರೋಬ್ಬರಿ 74,650 ಕೋಟಿ ರೂಪಾಯಿಗಳನ್ನು ವ್ಯಯಿಸುವ ಮೂಲಕ ಇತಿಹಾಸ ನಿರ್ಮಿಸಿದೆ.
ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ಮಹಿಳೆಯರ ಮೊಬೈಲ್‌ಗಳಿಗೆ ಸಂದೇಶ (SMS) ಬರಲಿದ್ದು, ಸಾರ್ವಜನಿಕರು ಆತಂಕಪಡದೆ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿಕೊಳ್ಳಲು ಕೋರಲಾಗಿದೆ.
