
ದೆಹಲಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು
ಬೆಂಗಳೂರು,ಜು. 16: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗಿದ್ದು,ಸಚಿವರ ಪಟ್ಟಿಗೆ ಅಂತಿಮ ರೂಪ ಕೊಡುವ ಕಾರ್ಯ ದೆಹಲಿಯಲ್ಲಿ ನಡೆದಿದ್ದು, ಇನ್ನು ೩-೪ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವುದು ಬಹುತೇಕ ನಿಶ್ಚಿತವಾಗಿದೆ.
ಸದ್ಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಯಲ್ಲಿಂದು ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡಲಾಗುತ್ತದೆ.

ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿ, ಯಾರನ್ನು ಸಚಿವರನ್ನಾಗಿಸಬೇಕು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆದಿದ್ದು, ಸಚಿವರ ಪಟ್ಟಿಯನ್ನು ಸಿದ್ಧಗೊಳಿಸಿ ಅಂತಿಮವಾಗಿ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರ ಅನುಮೋದನೆ ಪಡೆದು ಹೈಕಮಾಂಡ್ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಸಚಿವರ ಪಟ್ಟಿಗೆ ಇಂದು ಅಂತಿಮ ರೂಪ ಸಿಗುವುದು ಬಹುತೇಕ ಪಕ್ಕ ಆಗಿದ್ದು,ಇನ್ನು 3-4 ದಿನಗಳಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ.
ಸಂಪುಟ ವಿಸ್ತರಣೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲು ನಿನ್ನೆ ರಾತ್ರಿಯೇ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬೆಳಿಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದಿರುವ ಉನ್ನತ ಮಟ್ಟದಲ್ಲಿ ಸಭೆಯಲ್ಲಿ ಭಾಗಿಯಾಗಿ ಯಾರನ್ನು ಸಚಿವರನ್ನಾಗಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗಿಯಾಗಿದ್ದು,ಎಲ್ಲರೂ ಚರ್ಚಿಸಿ ಸಚಿವರ ಪಟ್ಟಿಯನ್ನು ಸಿದ್ಧಗೊಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಡೆಯಿಂದ ಯಾರನ್ನು ಸಚಿವರನ್ನಾಗಿಸಬೇಕು ಎಂಬ ಪಟ್ಟಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.ಜೊತೆಗೆ ಎಲ್ಲಾ ಹೆಸರುಗಳ ಬಗ್ಗೆ ಚರ್ಚಿಸುವ ಹೈಕಮಾಂಡ್ ಇಬ್ಬರು ನಾಯಕರುಗಳಿಂದ ಸಚಿವರ ಪಟ್ಟಿಯನ್ನು ತೆಗೆದುಕೊಂಡು ಅಂತಿಮವಾಗಿ ತಾನೇ ಕುಳಿತು ಸಚಿವರ ಪಟ್ಟಿಗೆ ಮೋಕ್ಷ ನೀಡಲಿದೆ.
ಇಂದಿನ ಉನ್ನತ ಮಟ್ಟದ ಸಭೆಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಹುಲ್‌ಗಾಂಧಿ ಜೊತೆ ಚರ್ಚಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದು, ಇದಾದ ಬಳಿಕವೇ ಸಚಿವರ ಪಟ್ಟಿ ಬಿಡುಗಡೆಯಾಗಲಿದೆ.
ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿದ್ದ 11 ಸಚಿವರನ್ನು ಸಂಪುಟದಲ್ಲಿ ಮುಂದುವರೆಸಲಾಗಿದ್ದು, ಈಗ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಐದಾರು ಸಚಿವರಿಗಷ್ಟೇ ಮತ್ತೆ ಸಚಿವರಾಗುವ ಭಾಗ್ಯ ಸಿಗಲಿದ್ದು, ಉಳಿದಂತೆ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಸಚಿವ ಸಂಪುಟದಲ್ಲಿ 20 ಸ್ಥಾನಗಳು ಖಾಲಿಯಿದ್ದು,ಈ ಇಪ್ಪತ್ತು ಸ್ಥಾನಗಳಲ್ಲಿ ಕನಿಷ್ಠ 10 ರಿಂದ 12 ಮಂದಿ ಹೊಸಬರಿಗೆ ಸಚಿವ ಪಟ್ಟ ಸಿಗುವುದು ಬಹುತೇಕ ನಿಶ್ಚಿತ ಎಂದು ಹೇಳಲಾಗಿದೆ.
ಖಾಲಿ ಇರುವ 20 ಸ್ಥಾನಗಳಿಗೆ ೪೦ಕ್ಕೂ ಹೆಚ್ಚು ಶಾಸಕರು ಪೈಪೋಟಿ ನಡೆಸಿದ್ದು, ಯಾರನ್ನು ಸಚಿವರನ್ನಾಗಿಸಬೇಕು ಎಂಬುದು ಹೈಕಮಾಂಡ್‌ಗೆ ಸ್ವಲ್ಪಮಟ್ಟಿಗೆ ತಲೆನೋವು ತಂದಿದೆಯಾದರೂ ರಾಹುಲ್‌ಗಾಂಧಿ ಗಮನಕ್ಕೆ ಎಲ್ಲವನ್ನು ತಂದು ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ.
ಪ್ರಾದೇಶಿಕವಾರು, ಜಾತಿವಾರು, ಹಿರಿತನ ಎಲ್ಲವನ್ನು ಗಣನೆಗೆ ತೆಗೆದುಕೊಂಡಿರುವ ಹೈಮಾಕಂಡ್ ಅಳೆದು ತೂಗಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದು, ಬಹುತೇಕ ಭಾನುವಾರದ ಹೊತ್ತಿಗೆ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಸೋಮವಾರ ಇಲ್ಲವೇ ಮಂಗಳವಾರ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯುವ ಸಾಧ್ಯತೆಗಳು ಹೆಚ್ಚಿವೆ.
ಇದೇ ವೇಳೆ ಶತಾಯ ಗತಾಯ ಸಚಿವ ಸ್ಥಾನ ಪಡೆಯಲೇಬೇಕು ಎಂದು ಸುಮಾರು 25ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲೇ ಬೀಡು ಬಿಟ್ಟಿದ್ದು, ಹೈಕಮಾಂಡ್‌ನಲ್ಲಿರುವ ತಮ್ಮ ಗಾಡ್ ಫಾದರ್‌ಗಳ ಮೂಲಕ ಒತ್ತಡ ಹೇರಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಹಲವು ಶಾಸಕರು ನಡೆಸಿದ್ದಾರೆ.
ಸಚಿವ ಸಂಪುಟದಲ್ಲಿ ನಾಲ್ಕೈದು ಬಾರಿ ಗೆದ್ದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕೂಗು ಸಹ ಇದ್ದು, ಹಾಗೆಯೇ ಹೊಸ ಮುಖಗಳಿಗೆ ಅದರಲ್ಲೂ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಕಾಂಗ್ರೆಸ್‌ನ 2ನೇ ಸಾಲಿನಲ್ಲಿರುವ ಯುವ ನಾಯಕರುಗಳು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಹಾಗಾಗಿ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಗಳು ಇವೆ. ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂಬುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.
