
ಆದಿಚುಂಚನಗಿರಿ ಮಠದ ಜಮೀನು ನುಂಗಲು ಯತ್ನಿಸಿದ್ದ 6 ಸರ್ಕಾರಿ ಅಧಿಕಾರಿಗಳು ಸೇರಿ 11 ಮಂದಿ ಅರೆಸ್ಟ್
ಬೆಂಗಳೂರು: ಆದಿಚುಂಚನಗಿರಿ ಮಠಕ್ಕೆ ಸೇರಿದ ಸುಮಾರು ₹120 ಕೋಟಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿದ ಬಹುಕೋಟಿ ವಂಚನೆ ಪ್ರಕರಣವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದು, 11 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 6 ಮಂದಿ ಸರ್ಕಾರಿ ಅಧಿಕಾರಿಗಳು ಸೇರಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.
ಬಂಧಿತರಲ್ಲಿ ಆರೋಗ್ಯಸಾಮಿ, ಫ್ರಾನ್ಸಿಸ್, ಜೋಸ್ವನ್, ಶ್ರೀನಿವಾಸ್ ಹಾಗೂ ನರೇಂದ್ರ ಸೇರಿದಂತೆ ಒಟ್ಟು 11 ಮಂದಿ ಇದ್ದಾರೆ. ಸರ್ಕಾರಿ ಅಧಿಕಾರಿಗಳಾದ ಬೇಗೂರು ಗ್ರಾಮ ಲೆಕ್ಕಾಧಿಕಾರಿ ಶಿವಪ್ರಸಾದ್, ರೆವಿನ್ಯೂ ಇನ್ಸ್‌ಪೆಕ್ಟರ್ ಕಿರಣ್, ಡೆಪ್ಯುಟಿ ತಹಶೀಲ್ದಾರ್ ದೀಪಕ್, ಕೆಂಗೇರಿ ಗ್ರಾಮ ಲೆಕ್ಕಾಧಿಕಾರಿ ಸತೀಶ್ ಕುಮಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಹಾಗೂ ಡೆಪ್ಯುಟಿ ತಹಶೀಲ್ದಾರ್ ಅವರನ್ನು ಕೂಡ ಬಂಧಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸುಮಾರು 30 ವರ್ಷಗಳ ಹಿಂದೆ ಭಕ್ತರು ಆದಿಚುಂಚನಗಿರಿ ಮಠಕ್ಕೆ 45 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಅದರಲ್ಲಿ ಕೆಂಗೇರಿ ಹೋಬಳಿ ಕಂಬಳಿಪುರ ಗ್ರಾಮದ ಸರ್ವೇ ನಂ. 43ರ 6 ಎಕರೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ನಡೆಸಲಾಗಿದೆ.
ವಂಚನೆಯ ಹಿಂದೆ ಮಾಸ್ಟರ್‌ಮೈಂಡ್ ಯಾರು..?
ಪ್ರಕರಣದ ಪ್ರಮುಖ ರೂವಾರಿ ಎಂದು ಶಂಕಿಸಲಾಗಿರುವ ನೆಲಮಂಗಲ ಮೂಲದ ನರೇಶ್ ಗೌಡ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವಂಚನೆ ನಡೆದಿದ್ದು ಹೇಗೆ..?
ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗವಾಗಿದೆ. ಮಠದ ಜಮೀನು ಕಬಳಿಸುವ ಸಂಚು ರೂಪಿಸಿದ್ದ ನರೇಶ್ ಗೌಡ, ಈ ಯೋಜನೆಯನ್ನು ಬ್ರೋಕರ್ ಆರೋಗ್ಯಸಾಮಿಗೆ ತಿಳಿಸಿದ್ದ. ಬಳಿಕ ಇಬ್ಬರೂ ಸೇರಿ ಜಮೀನಿನ ಮೂಲ ಮಾಲೀಕರ ಹೆಸರಿನ ಮತ್ತೊಬ್ಬ ವ್ಯಕ್ತಿಯನ್ನು ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದರು.
ವಂಚನೆಗೆ ಸತ್ತ ವ್ಯಕ್ತಿಯ ದಾಖಲೆ ಅಗತ್ಯವಿದ್ದ ಕಾರಣ, ಸ್ಮಶಾನಕ್ಕೆ ತೆರಳಿ ಮೂಲ ಮಾಲೀಕರ ಹೆಸರಿನ ಸಮಾಧಿಯನ್ನು ಪತ್ತೆಹಚ್ಚಿ, ಆ ಕುಟುಂಬದವರನ್ನು ಸಂಪರ್ಕಿಸಿದ್ದರು. ಇದೇ ವೇಳೆ ಮತ್ತೊಬ್ಬ ಆರೋಪಿ ಫ್ರಾನ್ಸಿಸ್ ಸಿಕ್ಕಿದ್ದು, ಆತನ ತಂದೆಯ ಹೆಸರು ಹಾಗೂ ಮೂಲ ಮಾಲೀಕರ ಹೆಸರು ಮತ್ತು ವಯಸ್ಸು ಹೊಂದಿಕೆಯಾಗಿದ್ದರಿಂದ ಅದನ್ನೇ ದುರುಪಯೋಗಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಬೇಗೂರು ಠಾಣೆಯ ರೌಡಿ ಶೀಟರ್ ಆಗಿರುವ ಫ್ರಾನ್ಸಿಸ್ ಹಾಗೂ ಜೋಸ್ವನ್ ಅವರನ್ನು ಅಣ್ಣ-ತಮ್ಮಂದಿರೆಂದು ತೋರಿಸಿ ನಕಲಿ ವಂಶವೃಕ್ಷ ಸೃಷ್ಟಿಸಲಾಗಿದೆ.
ಸರ್ಕಾರಿ ಅಧಿಕಾರಿಗಳ ಪಾತ್ರ
ಹಣದ ಆಮಿಷಕ್ಕೆ ಒಳಗಾಗಿ ಬೇಗೂರು ಗ್ರಾಮ ಲೆಕ್ಕಾಧಿಕಾರಿ ಶಿವಪ್ರಸಾದ್, ರೆವಿನ್ಯೂ ಇನ್ಸ್‌ಪೆಕ್ಟರ್ ಕಿರಣ್ ಹಾಗೂ ಡೆಪ್ಯುಟಿ ತಹಶೀಲ್ದಾರ್ ದೀಪಕ್ ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ್ದಾರೆ ಎನ್ನಲಾಗಿದೆ.
ನಂತರ ಕೆಂಗೇರಿ ಗ್ರಾಮ ಲೆಕ್ಕಾಧಿಕಾರಿ ಸತೀಶ್ ಕುಮಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಹಾಗೂ ಡೆಪ್ಯುಟಿ ತಹಶೀಲ್ದಾರ್ ನಕಲಿ ದಾಖಲೆಗಳ ಆಧಾರದ ಮೇಲೆ ಪೌತಿ ಖಾತೆ ಮಾಡಿಕೊಟ್ಟಿದ್ದಾರೆ. ದಾಖಲೆಗಳು ನಕಲಿ ಎಂಬುದು ತಿಳಿದಿದ್ದರೂ ಪ್ರಕ್ರಿಯೆ ಪೂರ್ಣಗೊಳಿಸಿದ್ದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದಾದ ಬಳಿಕ ಆರೋಪಿಗಳು ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು, ಬಳಿಕ ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡಿರುವ ಆರೋಪವೂ ಕೇಳಿಬಂದಿದೆ.
ಪೊಲೀಸರ ತನಿಖೆಯಿಂದ ಬಯಲಾದ ಜಾಲ
ಪ್ರಕರಣದ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಆದಿಚುಂಚನಗಿರಿ ಮಠದ ಆಡಳಿತ ಮಂಡಳಿ ದೂರು ನೀಡಿತ್ತು. ಆರಂಭದಲ್ಲಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ತನಿಖೆಯನ್ನು ಕೆಂಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಗದೀಶ್ ಅವರಿಗೆ ವಹಿಸಲಾಗಿತ್ತು.
ಸೂಕ್ಷ್ಮ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದ ತಂಡ ವಂಚನೆಯ ಸಂಪೂರ್ಣ ಜಾಲವನ್ನು ಭೇದಿಸಿ, 11 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ನರೇಶ್ ಗೌಡನ ಬಂಧನಕ್ಕಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
