LatestTop Storiesಬೆಂಗಳೂರು-Bengaluruರಾಜ್ಯ-Karnataka

ಫುಟ್‌ಪಾತ್ ಆಯ್ತು, ಈಗ ಅಪಾರ್ಟ್‌ಮೆಂಟ್‌ಗಳಿಗೆ ಮೂಗುದಾರ: ಹೊಸ ಕಾನೂನು ರಚನೆಗೆ ಸರ್ಕಾರ ಚಿಂತನೆ!

ಬೆಂಗಳೂರು: ಸಿಲಿಕಾನ್ ಸಿಟಿಯ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಬೆನ್ನಲ್ಲೇ, ರಾಜ್ಯ ಸರ್ಕಾರ ಈಗ ಅಪಾರ್ಟ್‌ಮೆಂಟ್‌ಗಳ ಕಡೆಗೆ ಗಮನ ಹರಿಸಿದೆ. ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ಫ್ಲ್ಯಾಟ್ ಮಾಲೀಕರು ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಹಾಗೂ ಅವರಿಗೆ ಹೆಚ್ಚಿನ ಕಾನೂನಾತ್ಮಕ ಹಕ್ಕುಗಳನ್ನು ಕೊಡಿಸಲು ಸಮಗ್ರ ಹೊಸ ಕಾಯ್ದೆ ರಚನೆಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
​ಈ ಮಹತ್ವದ ಕಾಯ್ದೆಯ ರೂಪರೇಷೆಗಳ ಕುರಿತು ಚರ್ಚಿಸಲು ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಸರ್ಕಾರ ಬೃಹತ್ ಸಮಾಲೋಚನಾ ಸಭೆಯನ್ನು ಹಮ್ಮಿಕೊಂಡಿದೆ.

ಫುಟ್‌ಪಾತ್ ಆಯ್ತು ಈಗ ಅಪಾರ್ಟ್‌ಮೆಂಟ್‌ಗಳಿಗೆ ಮೂಗುದಾರ

ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಬಿಲ್ಡರ್‌ಗಳ ನಡುವಿನ ದಶಕಗಳ ಕಾಲದ ವಿವಾದಗಳು ಮತ್ತು ಗೊಂದಲಗಳಿಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಸಿದ್ಧಪಡಿಸುತ್ತಿರುವ ‘ನೂತನ ಅಪಾರ್ಟ್‌ಮೆಂಟ್ ಕರಡು ವಿಧೇಯಕ’ದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಾಗುತ್ತಿದೆ. ಫ್ಲ್ಯಾಟ್ ಖರೀದಿದಾರರ ಹಿತ ಕಾಯುವ ಮತ್ತು ಬಿಲ್ಡರ್‌ಗಳ ನಿರಂಕುಶಾಧಿಕಾರಕ್ಕೆ ಕಡಿವಾಣ ಹಾಕುವ ಹಲವು ಮಹತ್ವದ ಅಂಶಗಳು ಈ ಕರಡು ವಿಧೇಯಕದಲ್ಲಿ ಅಡಕವಾಗಿವೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಸದಾ ಕಾಡುವ ಪಾರ್ಕಿಂಗ್ ಹಂಚಿಕೆ ವಿವಾದಗಳು, ಕಳಪೆ ಮೂಲಸೌಕರ್ಯ ಹಾಗೂ ಕ್ಲಬ್‌ಹೌಸ್ ಬಳಕೆಯ ಕುರಿತಾದ ದೂರುಗಳಿಗೆ ಶೀಘ್ರ ಮತ್ತು ಕಾಲಮಿತಿಯೊಳಗೆ ನ್ಯಾಯ ಒದಗಿಸಲು ವಿಶೇಷ ವ್ಯವಸ್ಥೆ ಮಾಡಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಜಂಟಿ ನೇತೃತ್ವದಲ್ಲಿ ಈ ವಿಶೇಷ ಸಭೆ ನಡೆಯಲಿದೆ. ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ಈ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದ್ದು, ಅಪಾರ್ಟ್‌ಮೆಂಟ್ ಮಾಲೀಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ.

Share with Friends
author avatar
Digital Desk