
ಚಾ.ನಗರ ಜಡ್ಜ್ಗೆ ಜೀವ ಬೆದರಿಕೆ ಕರೆ
ಚಾಮರಾಜನಗರ,ಜು.10: ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಲ್ಲಿ ಸರಣಿ ಹುಸಿ ಬಾಂಬ್ ಇ-ಮೇಲ್ ಸಂದೇಶದ ಬೆನ್ನಲ್ಲೇ ಇದೀಗ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ.
ಸದ್ಯ ಆರೋಪಿಗಳಿಗೆ ಜಾಮೀನು ನೀಡದಿದ್ದರೆ ಕೊಲ್ಲುವುದಾಗಿ ಕಿಡಿಗೇಡಿಗಳು ನೇರವಾಗಿ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ ಮೊಬೈಲ್ಗೇ ಇಂಟರ್ನೆಟ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ತಾಂತ್ರಿಕ ವ್ಯವಸ್ಥೆಯನ್ನು ಬಳಸಿ 41000697200 ಸಂಖ್ಯೆಯಿಂದ ಅನಾಮಧೇಯ ಇಂಟರ್ನೆಟ್ ಕಾಲ್ ಮಾಡಿ ನ್ಯಾಯಾಲಯದಲ್ಲಿ ಸದ್ಯ ವಿಚಾರಣೆಯಲ್ಲಿರುವ ಅಪರಾಧ ಸಂಖ್ಯೆ 144/2026 ಪ್ರಕರಣದ ಆರೋಪಿಗಳಿಗೆ ತಕ್ಷಣವೇ ಜಾಮೀನು ಮಂಜೂರು ಮಾಡಬೇಕೆಂದು ಆತ ಒತ್ತಾಯಿಸಿದ್ದಾನೆ.

ಒಂದು ವೇಳೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಮುಂದಿನ ಟಾರ್ಗೆಟ್ ನೀನೇ, ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಅವಾಚ್ಯ ಶಬ್ದ ಬಳಸಿ ಏಕವಚನದಲ್ಲಿ ನಿಂದಿಸಿದ್ದಾನೆ. ನ್ಯಾಯಾಧೀಶರಿಗೆ ನೇರ ಜೀವ ಬೆದರಿಕೆ ಹಾಕಿ ಉದ್ಧಟತನ ಪ್ರದರ್ಶಿಸಿದ್ದಾನೆ.ಇದೇ ವೇಳೆ ನ್ಯಾಯಾಧೀಶರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪ್ರಾಣ ಬೆದರಿಕೆ ಹಾಕಿರುವ ಕುರಿತು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಮೌಖಿಕವಾಗಿ ಪೊಲಸ ಮಾಹಿತಿ ನೀಡಿದ್ದಾರೆ. ತಾಂತ್ರಿಕವಾಗಿ ಈ ಸಂಖ್ಯೆಯನ್ನು ಪತ್ತೆ ಹಚ್ಚಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
