
ಅಧಿಕಾರಿಗಳೇ ಮೀಟಿಂಗ್ ನಲ್ಲಿ ಮೊಬೈಲ್ ಬಳಸಿದ್ರೆ ಸಸ್ಪೆಂಡ್..!
ಬೆಳಗಾವಿ,ಜುಲೈ 9: ಅಧಿಕಾರಿಗಳು ಜನರ ಮಧ್ಯೆ ಇರಬೇಕು,ಕಚೇರಿಗಳ ಗೋಡೆಗಳ ನಡುವೆ ಅಲ್ಲ. ಅಧಿಕಾರಿಗಳು ಪ್ರತಿದಿನ ಜನರ ವಿಶ್ವಾಸಕ್ಕೆ ಉತ್ತರದಾಯಕರಾಗಿರಬೇಕು. ಕರ್ತವ್ಯ ನಿರ್ವಹಿಸದಿರುವುದು ಕೇವಲ ಆಡಳಿತ ವೈಫಲ್ಯವಲ್ಲ, ಅದು ಜನತೆಗೆ ಮಾಡುವ ದ್ರೋಹ ಎಂದು ಸಿಎಂ ಡಿ ಕೆ ಶಿವಕುಮಾರ್ ಎಲ್ಲಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸುವರ್ಣಸೌಧದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಆಡಳಿತದಲ್ಲಿ ಶಿಸ್ತಿಗೆ ಯಾವುದೇ ರಾಜಿ ಇಲ್ಲ, ಸಭೆಗಳ ಮಧ್ಯೆ ಯಾವುದೇ ಅಧಿಕಾರಿ ಮೊಬೈಲ್ನಲ್ಲಿ ಮಾತನಾಡುತ್ತಿರುವುದು ಕಂಡುಬಂದರೆ, ಸಭೆ ಮುಗಿಯುವ ವೇಳೆಗೆ ಅವರ ಅಮಾನತು ಆದೇಶ ಸಿದ್ಧವಾಗಿರುತ್ತದೆ ಎಂದು ಹೇಳಿದರು.

ಇನ್ನು ಜನರ ಸಮಸ್ಯೆಗಳನ್ನು ಕೇಳಲು ಅಧಿಕಾರಿಗಳು ಜನರ ಬಳಿಯೇ ಇರಬೇಕು.ಸಣ್ಣ ಕೆಲಸಗಳಿಗೂ ಜನರನ್ನು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆದಾಡಿಸುವ ಸಂಸ್ಕೃತಿ ಕೊನೆಗಾಣಬೇಕು. ಸಾಧ್ಯವಾದಷ್ಟು ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥವಾಗಬೇಕು ಎಂದು ಸೂಚಿಸಿದರು.

ಇದಲ್ಲದೆ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲೇ ನೆಲೆಸಬೇಕು.ಪ್ರತಿ ಜಿಲ್ಲಾ ಮಟ್ಟದ ಅಧಿಕಾರಿಯೂ ತಮ್ಮ ಅಧೀನ ಅಧಿಕಾರಿಗಳ ಕಾರ್ಯಚಟುವಟಿಕೆಗಳ ಬಗ್ಗೆ ನಿತ್ಯ ಮಾಹಿತಿ ಹೊಂದಿರಬೇಕು.ಯಾರು ಯಾವ ಗ್ರಾಮಕ್ಕೆ ಭೇಟಿ ನೀಡಿದರು, ಯಾವ ಸಮಸ್ಯೆ ಪರಿಹರಿಸಿದರು ಎಂಬುದರ ದಾಖಲೆ ಪ್ರತಿದಿನ ನವೀಕರಿಸಬೇಕು.ಫೀಲ್ಡ್ ಆಡಳಿತವೇ ಉತ್ತಮ ಆಡಳಿತದ ಅಳತೆ ಎಂದರು.
