
ಏರ್‌ಪೋರ್ಟ್ ರಸ್ತೆಯಲ್ಲಿ ರೇಸಿಂಗ್ : ಮತ್ತೆ ಸದ್ದು ಮಾಡಿದ ಮುತ್ತಪ್ಪ ರೈ ಪುತ್ರನ ಲ್ಯಾಂಬೋರ್ಗಿನಿ
ಬೆಂಗಳೂರು: ಉದ್ಯಮಿ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಒಡೆತನದ ಲ್ಯಾಂಬೋರ್ಗಿನಿ ಕಾರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ಕಾರು ಡ್ರಿಫ್ಟಿಂಗ್ ಮಾಡುತ್ತಾ, ಸೈಲೆನ್ಸರ್‌ನಿಂದ ಬೆಂಕಿ ಉಗುಳುವ ಹಾಗೂ ಕರ್ಕಶ ಶಬ್ದ ಮಾಡುವ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
KA 05 NR 0009 ನೋಂದಣಿ ಸಂಖ್ಯೆಯ ಲ್ಯಾಂಬೋರ್ಗಿನಿ ಕಾರಿನ ವಿಡಿಯೋ ಪೊಲೀಸರ ಗಮನ ಸೆಳೆದಿದ್ದು, ಘಟನೆ ಯಾವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.
ವೈರಲ್ ವಿಡಿಯೋ ಆಧರಿಸಿ ಮೊದಲು ಪ್ರಕರಣ ದಾಖಲಿಸಿ ಬಳಿಕ ತನಿಖೆ ಮುಂದುವರಿಸುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ. ಕಾರು ಯಾವಾಗ ಚಲಾಯಿಸಲಾಯಿತು, ಆ ವೇಳೆ ವಾಹನದಲ್ಲಿದ್ದವರು ಯಾರು ಹಾಗೂ ಕಾರು ಚಾಲನೆ ಮಾಡಿದ್ದು ಯಾರು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ಲ್ಯಾಂಬೋರ್ಗಿನಿ ಕಾರು ಇದೇ ಮೊದಲ ಬಾರಿಗೆ ವಿವಾದಕ್ಕೆ ಸಿಲುಕಿಲ್ಲ. ಕಳೆದ ಮಾರ್ಚ್‌ನಲ್ಲಿ ಎಂಜಿ ರಸ್ತೆ ಸಮೀಪದ ಅನಿಲ್ ಕುಂಬ್ಳೆ ವೃತ್ತ ಹಾಗೂ ಕಬ್ಬನ್ ರಸ್ತೆಯಲ್ಲಿ ಇದೇ ಕಾರಿನಿಂದ ಡ್ರಿಫ್ಟಿಂಗ್ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯಗಳ ಪರಿಶೀಲನೆಯ ವೇಳೆ ರಿಕ್ಕಿ ರೈ ಅವರೇ ಕಾರು ಚಲಾಯಿಸುತ್ತಿದ್ದದ್ದು ಪತ್ತೆಯಾಗಿತ್ತು.
ಆ ಸಂದರ್ಭದಲ್ಲಿ ಆರಂಭದಲ್ಲಿ ಆರೋಪವನ್ನು ನಿರಾಕರಿಸಿದ್ದ ರಿಕ್ಕಿ ರೈ, ಬಳಿಕ ಸಿಸಿಟಿವಿ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾರು ಚಾಲನೆ ಮಾಡಿರುವುದು ದೃಢಪಟ್ಟಿತ್ತು. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬಳಿಕ ನ್ಯಾಯಾಲಯದಲ್ಲಿ ದಂಡ ಪಾವತಿಸಲಾಗಿತ್ತು.
ಇದೀಗ ಅದೇ ಕಾರು ಮತ್ತೆ ಏರ್‌ಪೋರ್ಟ್ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ವಿಡಿಯೋ ಪರಿಶೀಲನೆಯ ಬಳಿಕ ಆರೋಪಗಳು ಸಾಬೀತಾದರೆ ಅತಿವೇಗದ ಚಾಲನೆ, ಮಾರ್ಪಡಿಸಿದ ಸೈಲೆನ್ಸರ್ ಬಳಕೆ, ಸೈಲೆನ್ಸರ್‌ನಿಂದ ಬೆಂಕಿ ಉಗುಳಿಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಶಬ್ದ ಸೃಷ್ಟಿಸಿದ ಆರೋಪಗಳಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಪೊಲೀಸರು ವೈರಲ್ ವಿಡಿಯೋದ ಸತ್ಯಾಸತ್ಯತೆ ಹಾಗೂ ಘಟನೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
