BlogLatestTop Storiesರಾಜ್ಯ-Karnataka

ಕರಾಳ ಶನಿವಾರ : ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ 10ಕ್ಕೂ ಹೆಚ್ಚು ಮಂದಿ ಸಾವು

ಬೆಂಗಳೂರು : ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೆಲಮಂಗಲ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ 6 ಮಂದಿ ಮೃತಪಟ್ಟರೆ, ರಾಯಚೂರಿನಲ್ಲಿ ಬೈಕ್ ನಿಂದ ಬಿದ್ದ ಮಹಿಳೆ ಮೇಲೆ ಲಾರಿ ಹರಿದು ದೇಹ ಛಿದ್ರವಾಗಿರುವ ಘಟನೆ ನಡೆದಿದೆ.

*ಕಾರು, ಲಾರಿ, ಸ್ಕೂಲ್ ಬಸ್ ನಡುವೆ ಸರಣಿ ಅಪಘಾತ : 6 ಮಂದಿ ದುರ್ಮರಣ.
ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವಿನ ಸರಣಿ ಅಪಘಾತದಲ್ಲಿ 6 ಮಂದಿ ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ. ಮೃತರನ್ನು ಚಂದ್ರಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಅಂತಾ ಗುರುತಿಸಲಾಗಿದೆ.

ತುಮಕೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕಾರಿನ ಮೇಲೆ ಕಂಟೇನರ್‌ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಎರಡು ಹೆಣ್ಣು ಮಕ್ಕಳು, ಒಬ್ಬ ಯುವಕ, ಮತ್ತೊರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದರಿಂದ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿಮೀ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ಆಗಮಿಸಿದ್ದು, ಟ್ರಾಫಿಕ್ ಕ್ಲೀಯರ್ ಮಾಡಿದ್ದಾರೆ. ಅದೇರೀತಿ ಅಪಘಾತದ ವೇಳೆ ಕಂಟೇನ‌ರ್ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಇದರಿಂದ ಕಾರು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು.

ಕಾರಿಗೆ ಲಾರಿ ಡಿಕ್ಕಿಯಾಗಿ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಸಾವು :
ಅತಿವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಗರದ ಬಿಐಟಿ ಕಾಲೇಜಿನ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.’

ಘಟನೆಯಲ್ಲಿ ಒಬ್ಬ ಬಿಇ ವಿದ್ಯಾರ್ಥಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ನಾಲ್ವರು ವಿದ್ಯಾರ್ಥಿಗಳು ನಗರದ ಬಿಐಟಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದು, ಪ್ರಾಜೆಕ್ಟ್‌ ವರ್ಕ್‌ ಹಾಗೂ ಪ್ರವಾಸಕ್ಕಾಗಿ ತಲಕಾಡಿಗೆ ಇಂದು ಮಧ್ಯಾಹ್ನ 12.15ರ ಸುಮಾರಿನಲ್ಲಿ ಕಾರಿನಲ್ಲಿ ಹೋಗುತ್ತಿದ್ದರು.

ಮಳವಳ್ಳಿ ತಾಲ್ಲೂಕಿನ ಚನ್ನೇಗೌಡನದೊಡ್ಡಿ ಕ್ರಾಸ್‌ ಬಳಿ ಅತಿ ವೇಗವಾಗಿ ಬಂದ ಲಾರಿಯೊಂದು ಕೆಎಸ್‌ಆರ್‌ಟಿಸಿ ಬಸ್‌ಅನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

*ಬೈಕ್ ನಿಂದ ಬಿದ್ದ ಮಹಿಳೆ ಮೇಲೆ ಲಾರಿ ಹರಿದು ದೇಹ ಛಿದ್ರ :

ಲಾರಿ ಡಿಕ್ಕಿಯಾಗಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದಿದ್ದು, 55 ವರ್ಷದ ಮಹಿಳೆ ದೇಹ ಛಿದ್ರವಾಗಿದೆ. ಹುಸೇನಮ್ಮ ಮೃತಪಟ್ಟವರು. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಹೊರಗಿನ ಮರ ಕ್ರಾಸ್ ನಲ್ಲಿ ಬೀಕರ ಅಪಘಾತ ಸಂಭವಿಸಿದೆ. ಪುಲಮೇಶ್ವರ ದಿನ್ನಿ ಗ್ರಾಮದ ಹುಸೇನಮ್ಮ ಮಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಬೈಕ್ ಗೆ ಹಿಂದಿನಿಂದ ಲಾರಿ ಡಿಕ್ಕಿಯಾಗಿ ಕೆಳಗೆ ಬಿದ್ದ ಅವರ ಮೇಲೆ ಲಾರಿ ಹರಿದಿದೆ. ತಾಯಿ ದೇಹದ ಅರ್ಧ ಭಾಗ ಹಿಡಿದು ಮಗ ಗೋಳಾಟ ನಡೆಸಿದ್ದಾನೆ. ಸಿಂಧನೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

*ತಂದೆಯ ಕಣ್ಮುಂದೆಯೆ ಸಾವನ್ನಪ್ಪಿದ ಯುವತಿ !
ಚಿಕ್ಕಬಳ್ಳಾಪುರ : ತಂದೆಯೊಂದಿಗೆ ಬಸ್​ನಿಲ್ದಾಣಕ್ಕೆ ಹೋಗುತ್ತಿದ್ದ ವೈದ್ಯ ವಿದ್ಯಾರ್ಥಿನಿ ಕ್ಯಾಂಟರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು. ಮೃತ ಯುವತಿಯನ್ನು ಯೋಗಿತಾ ಎಂದು ಗುರುತಿಸಲಾಗಿದೆ. 22 ವರ್ಷದ ಮೃತ ಯೋಗಿತಾ ಪಶು ವೈದ್ಯ ವಿದ್ಯಾರ್ಥಿನಿಯಾಗಿದ್ದು. ತನ್ನ ತಂದೆಯೊಂದಿಗೆ ಬೈಕ್​ನಲ್ಲಿ ಬಸ್​​ ಸ್ಟ್ಯಾಂಡ್​ಗೆ ಹೋಗುತ್ತಿದ್ದಳು. ಈ ವೇಳೆ ಚಿಕ್ಕಬಳ್ಳಾಪುರದ ಎಸ್​.ಎಸ್​ ವೃತ್ತದಲ್ಲಿ ಬೈಕ್​ಗೆ ಕ್ಯಾಂಟರ್​ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕ್ಯಾಂಟರ್​ ಡಿಕ್ಕಿಯಾಗುತ್ತಿದ್ದಂತೆ ಯುವತಿ ಕೆಳಗೆ ಉರುಳಿದ್ದು. ಯುವತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಅದೃಷ್ಟವಶಾತ್​ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕಬಳ್ಳಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

*ಶಾಲಾ ಪ್ರವಾಸಕ್ಕೆ ಬಂದಿದ್ದ ವ್ಯಾನ್​​ ಪಲ್ಟಿಯಾಗಿ 5 ಜನ ಮಕ್ಕಳಿಗೆ ಗಾಯ
ಚಿಕ್ಕಮಗಳೂರು : ಶಾಲಾ ಪ್ರವಾಸಕ್ಕೆ ಬಂದಿದ್ದ ವ್ಯಾನ್​ ಪಲ್ಟಿಯಾದ ಪರಿಣಾಮ 5 ಮಕ್ಕಳಿಗೆ ಗಾಐವಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು. ಮುಳ್ಳಯನ ಗಿರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದ್ದು. ಮೈಸೂರಿನ ಗೋಪಾಲಸ್ವಾಮಿ ಶಾಲೆಯ ಮಕ್ಕಳು ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದರು. ವ್ಯಾನಿನ ಟೈರ್​ ಬ್ಲಾಸ್ಟ್​ ಆಗಿ ಅಪಘಾತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.ಒಟ್ಟಿ 12 ಜನ ಮಕ್ಕಳು ಪ್ರವಾಸಕ್ಕೆ ಬಂದಿದ್ದರು. ಇವರಲ್ಲಿ ಒಟ್ಟು 5 ಜನರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

Share with Friends
author avatar
News Desk