BlogLatestರಾಜ್ಯ-Karnataka

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ನಂದಿನಿ ಇಡ್ಲಿ, ದೋಸೆ ಹಿಟ್ಟು

ಬೆಂಗಳೂರು: ಡಿಸೆಂಬರ್ ಅಂತ್ಯದೊಳಗೆ ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಕೆಎಂಎಫ್ ತಿಳಿಸಿದೆ. ಕೇರಳದ ಖಾಸಗಿ ಕಂಪನಿ ಮಾಲೀಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನಂದಿನಿ ಬ್ರಾಂಡ್ ದೋಸೆ ಹಿಟ್ಟು ಮಾರುಕಟ್ಟೆಗೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕೆಎಂಎಫ್ ಈ ನಿರ್ಧಾರ ಕೈಗೊಂಡಿದೆ.

ನಂದಿನಿ ಬ್ಯಾಂಡ್ ಅಡಿ ಡಿಸೆಂಬರ್ ಅಂತ್ಯದೊಳಗೆ ದೋಸೆಹಿಟ್ಟು ಮಾರುಕಟ್ಟೆ ಪ್ರವೇಶಿಸಲಿದೆ. ಈಗಾಗಲೇ ಟೆಂಡ‌ರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ವಾರದೊಳಗೆ ಕಾರ್ಯಾದೇಶ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಗೂ, ದೋಸೆ ಹಿಟ್ಟಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಹಜ ಪ್ರಕ್ರಿಯೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದರು. ಖಾಸಗಿ ಕಂಪನಿಯೊಂದು ಉತ್ಪಾದಿಸಿದ ದೋಸೆ ಹಿಟ್ಟನ್ನು ನಂದಿನಿ ಬ್ರ್ಯಾಂಡ್ ಪ್ಯಾಕೆಟ್‌ಗಳಲ್ಲಿ ತುಂಬಿಸಿ ಮಾರಾಟ ಮಾಡುವ ಪ್ರಸ್ತಾವನೆ ಆರು ತಿಂಗಳ ಹಿಂದೆಯೇ ಬಂದಿತ್ತು.

ಕೆಎಂಎಫ್ ಉತ್ಪಾದನೆ ಮೇಲೆ ಯಾವುದೇ ನಿಯಂತ್ರಣ ಇಲ್ಲದೆ ಬ್ರಾಂಡ್ ಬಳಕೆಗೆ ಅವಕಾಶ ಕಲ್ಪಿಸಿದರೆ ಸಮಸ್ಯೆ ಎದುರಾಗುವ ಅಪಾಯವಿತ್ತು. ದೋಸೆ ಹಿಟ್ಟು ಮಾರಾಟಕ್ಕೆ ಅನುಮತಿ ಕೊಟ್ಟಿದ್ದರೆ ವಾರ್ಷಿಕ 6 ರಿಂದ 10 ಲಕ್ಷದಷ್ಟು ಲಾಭ ಆಗುತ್ತಿತ್ತು. ಇಷ್ಟು ಹಣಕ್ಕಾಗಿ ನಂದಿನಿ ಬ್ರಾಂಡ್‌ಗೆ ಧಕ್ಕೆಯಾಗುವಂತೆ ನಿರ್ಧಾರ ಕೈಗೊಳ್ಳಬಾರದೆಂದು ಅನುಮತಿ ನೀಡಿರಲಿಲ್ಲ ಎಂದು ತಿಳಿಸಿದರು.

ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ಗೆ ಲಾಡು ಉತ್ಪಾದನೆಗೆ ಪೂರೈಕೆಯಾದ ತುಪ್ಪ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಎಚ್ಚೆತ್ತುಕೊಂಡು ಸ್ವಂತ ದೋಸೆ ಹಿಟ್ಟು ಉತ್ಪಾದಿಸುವ ಘಟಕ ಸ್ಥಾಪಿಸಿ ನಮ್ಮ ಸಿಬ್ಬಂದಿಯಿಂದಲೇ ಉತ್ಪಾದಿಸಿ ಮಾರು ಕಟ್ಟೆಗೆ ಪೂರೈಸುವ ಪ್ರಸ್ತಾವ ಮಂಡಿಸಲು ಸೂಚಿಸಿದ್ದು, ಈಗ ಟೆಂಡರ್ ಕೂಡ ಮುಕ್ತಾ ಯವಾಗಿದೆ. ಮುಖ್ಯಮಂತ್ರಿಯವರ ಅನುಮತಿ ಪಡೆದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದೇವೆ ಎಂದು ಹೇಳಿದರು.

Share with Friends
author avatar
News Desk