ಹರಿಯಾಣ ವಿಧಾನಸಭಾ ಚುನಾವಣೆ, ಇಂದು ಮತದಾನ
ಚಂಡೀಗಢ : ಬಿಗಿ ಭದ್ರತೆಯ ನಡುವೆ ಹರಿಯಾಣದ 90 ವಿಧಾನಸಭಾ ಸ್ಥಾನಗಳಿಗೆ ಇಂದು ಬೆಳಗ್ಗೆ ಮತದಾನ ಆರಂಭಗೊಂಡಿದ್ದು, ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಸಿಎಂ ಸೈನಿ, ಕಾಂಗ್ರೆಸ್ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ವಿನೇಶ್ ಫೋಗಟ್ ಮತ್ತು ಜೆಜೆಪಿಯ ದುಶ್ಯಂತ್ ಚೌತಾಲ ಅವರು ಕಣದಲ್ಲಿರುವ ಪ್ರಮುಖರು. ಒಟ್ಟು 1,027 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ ಪಂಕಜ್ ಅಗರ್ವಾಲ್ ಪ್ರಕಾರ, 2,03,54,350 ಮತದಾರರು ಚುನಾವಣೆಯಲ್ಲಿ ತಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಲ್ಲಿ 8,821 ಶತಾಯುಷಿಗಳು 3,283 ಪುರುಷರು ಮತ್ತು 5,538 ಮಹಿಳೆಯರು ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಭೂಪಿಂದರ್ ಸಿಂಗ್ ಹೂಡಾ ಮತ್ತು ಕಾಂಗ್ರೆಸ್‌ನ ವಿನೇಶ್ ಫೋಗಟ್, ಜೆಜೆಪಿಯ ದುಷ್ಯಂತ್ ಚೌತಾಲಾ ಮತ್ತು ಇತರ 1,027 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಇಂದಿನ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.
ಹಕ್ಕು ಚಲಾಯಿಸಿದ ಗಣ್ಯರು :
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ತಮ ಹಕ್ಕು ಚಲಾಯಿಸಿದ್ದಾರೆ. ಕುರುಕ್ಷೇತ್ರದ ಲಾಡ್ವಾದಿಂದ ಸ್ಪರ್ಧಿಸಿರುವ ಸೈನಿ ಅವರು ಅಂಬಾಲಾ ಜಿಲ್ಲೆಯ ನಾರೈಂಗರ್‌ನಲ್ಲಿರುವ ತಮ ಸ್ಥಳೀಯ ಗ್ರಾಮವಾದ ಮಿರ್ಜಾದಲ್ಲಿ ಮತ ಚಲಾಯಿಸಿದರು.
ಹರಿಯಾಣದ ಮಾಜಿ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರು ಕರ್ನಾಲ್‌ನಲ್ಲಿ ಮತ ಚಲಾಯಿಸಿದರೆ, ಮನು ಭಾಕರ್ ಅವರು ತಮ ಪೋಷಕರೊಂದಿಗೆ ಜಜ್ಜರ್ ಜಿಲ್ಲೆಯ ಗೋರಿಯಾ ಗ್ರಾಮದಲ್ಲಿ ಮತ ಚಲಾಯಿಸಿದರು.
ಅವರು ಮತ ಚಲಾಯಿಸುವ ಮೊದಲು, ಸೈನಿ ಗುರು ರವಿದಾಸ್ ದೇವಸ್ಥಾನ ಮತ್ತು ಗುರುದ್ವಾರದಲ್ಲಿ ಪ್ರಾರ್ಥಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೈನಿ, ಹರಿಯಾಣದ ಜನರ ಮನಸ್ಥಿತಿ ಸ್ಪಷ್ಟವಾಗಿದೆ, ಬಿಜೆಪಿ ಮೂರನೇ ಬಾರಿಗೆ ದೊಡ್ಡ ಜನಾದೇಶದೊಂದಿಗೆ ಸರ್ಕಾರ ರಚಿಸಲಿದೆ ಎಂದರು.
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ, ಆದರೆ ಕಾಂಗ್ರೆಸ್ 10 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ.
ದಾಖಲೆ ಮತದಾನಕ್ಕೆ ಮೋದಿ ಕರೆ :
ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಹರಿಯಾಣದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ. ಪ್ರಜಾಪ್ರಭುತ್ವದ ಈ ಪವಿತ್ರ ಉತ್ಸವದ ಭಾಗವಾಗಲು ಮತ್ತು ಹೊಸ ಮತದಾನದ ದಾಖಲೆಯನ್ನು ರಚಿಸಲು ನಾನು ಎಲ್ಲ ಮತದಾರರಿಗೆ ಮನವಿ ಮಾಡುತ್ತೇನೆ ಎಂದು ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ಮತದಾನದ ಹಕ್ಕನ್ನು ಮೊದಲ ಬಾರಿಗೆ ಬಳಸುತ್ತಿರುವ ಯುವ ಮತದಾರರಿಗೆ ಶುಭ ಹಾರೈಸಿದ್ದಾರೆ.
