BlogLatestTop Storiesವಿದೇಶ-International

ಅಮೆರಿಕಾದಿಂದ ಭಾರತಕ್ಕೆ ವಾಪಸ್ ಬರಲಿವೆ 297 ಪುರಾತನ ವಸ್ತುಗಳು

ವಾಷಿಂಗ್ಟನ್​: ಕ್ವಾಡ್ ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಭಾರತಕ್ಕೆ ಸೇರಿದ 297 ಪುರಾತನ ವಸ್ತುಗಳನ್ನು ಹಿಂದಿರುಗಿಸುವ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಕಳ್ಳಸಾಗಣೆ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಭಾರತದಿಂದ ಅಮೆರಿಕಾ ತಲುಪಿರುವ ಕಲಾಕೃತಿಗಳು ಸ್ವದೇಶಕ್ಕೆ ಮರಳಲಿವೆ.

2024 ರ ಜುಲೈ ನಲ್ಲಿ ದೆಹಲಿಯಲ್ಲಿ ನಡೆದಿದ್ದ ವಿಶ್ವ ಪರಂಪರೆ ಸಮಿತಿಯ 46 ನೇ ಸಭೆಯಲ್ಲಿ, ಸಾಂಸ್ಕೃತಿಕ ವಸ್ತುಗಳ ವಾಪಸಾತಿ ಕುರಿತು ಅಮೆರಿಕಾ ಮತ್ತು ಭಾರತ ನಡುವೆ ಒಪ್ಪಂದಕ್ಕೆ ಬರಲಾಗಿತ್ತು. ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮತ್ತು ಭಾರತದಿಂದ ಯುಎಸ್‌ಗೆ ಕಲಾಕೃತಿಗಳ ಕಳ್ಳಸಾಗಣೆಯನ್ನು ತಡೆಯಲು ಎರಡೂ ದೇಶಗಳು ತಮ್ಮ ಬದ್ಧತೆಯನ್ನು ಬಲಪಡಿಸಲು ನಿರ್ಧರಿಸಿವೆ.

ಯೂನೆಸ್ಕೋ 1970 ರಲ್ಲಿ ಸಾಂಸ್ಕೃತಿಕ ಸಂಪತ್ತುಗಳ ಕಳ್ಳತನ, ಲೂಟಿಯನ್ನು ತಡೆಯಲು ಮತ್ತು ವಸಾಹತುಶಾಹಿ ಆಡಳಿತಗಾರರಿಂದ ಲೂಟಿ ಮಾಡಿದ ಪ್ರಾಚೀನ ವಸ್ತುಗಳನ್ನು ಆಯಾ ದೇಶಗಳಿಗೆ ಹಿಂದಿರುಗಿಸಲು ನಿರ್ಧರಿಸಿತು. ಇದರ ಆಧಾರದ ಮೇಲೆ ಕೇಂದ್ರವು ಭಾರತದಿಂದ ಸಾಗಿಸಲಾದ ಬೆಲೆಬಾಳುವ ವಸ್ತುಗಳನ್ನು ವಾಪಸ್ ತರುತ್ತಿದೆ.

ಸ್ವಾತಂತ್ರ್ಯದ ನಂತರ, ಭಾರತ ಸರ್ಕಾರವು ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಸಿಂಗಾಪುರ್, ಆಸ್ಟ್ರೇಲಿಯಾ ಮತ್ತು ಕೆನಡಾದಿಂದ ಅನೇಕ ಪ್ರಾಚೀನ ವಸ್ತುಗಳನ್ನು ದೇಶಕ್ಕೆ ವಾಪಸ್​ ತರಲು ಯಶಸ್ವಿಯಾಗಿದೆ. ಇದರ ಭಾಗವಾಗಿ ಅಮೆರಿಕಾ ಇದುವರೆಗೆ 578 ಪುರಾತನ ವಸ್ತುಗಳನ್ನು ಹಸ್ತಾಂತರಿಸಿದೆ. ಇದೇ ಸಂದರ್ಭದಲ್ಲಿ 297 ಪುರಾತನ ವಸ್ತುಗಳನ್ನು ಹಿಂದಿರುಗಿಸಿರುವ ಅಮೆರಿಕಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.

Share with Friends
author avatar
News Desk