ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ರೋಗಿಗಳು ಸೇಫ್
ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಎಂಎಸ್ ರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆರ್ಎಂವಿ ಲೇಔಟ್ ಬಳಿ ಇರುವ ರಾಮಯ್ಯ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಗುರುವಾರ ಮಧ್ಯಾಹ್ನ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಆಸ್ಪತ್ರೆಯ ಎರಡನೇ ಅಂತಸ್ಥಿನಲ್ಲಿರುವ ಕಾರ್ಡಿಯಕ್ ಎಸಿ ವಾರ್ಡ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬಳಿಕ ಇತರೆ ವಾರ್ಡ್ಗಳಿಗೆ ಬೆಂಕಿ ಹರಡಿದೆ.
ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ರೋಗಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಿಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಬೆಂಕಿ, ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆ ಒಳಗಿದ್ದ ರೋಗಿಗಳು, ಅವರ ಸಂಬಂಧಿಕರು, ಸಿಬ್ಬಂದಿಗಳು ದಿಕ್ಕಾಪಾಲಾಗಿ ಓಡಿ ಹೊರಗಡೆ ಬಂದಿದ್ದಾರೆ.
ಘಟನೆಯಲ್ಲಿ ಆಸ್ಪತ್ರೆಗೆ 7-8 ನರ್ಸ್ಗಳಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಆ ನರ್ಸ್ಗಳು ಬೆಂಕಿ ಕಾಣಿಸಿಕೊಂಡ ಕೂಡಲೇ ರೋಗಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
