BlogLatestTop Storiesಕ್ರೀಡೆ-Sports

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 8ನೇ ಪದಕ, ಡಿಸ್ಕಸ್‌ ಥ್ರೋನಲ್ಲಿ ಯೋಗೇಶ್‌ಗೆ ಬೆಳ್ಳಿ

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 8ನೇ ಪದಕ ಮುಡಿಗೇರಿಸಿಕೊಂಡಿದೆ. ಸೋಮವಾರ ನಡೆದ ಪುರುಷರ ಡಿಸ್ಕಸ್ ಎಫ್ 56 ಫೈನಲ್‌ನಲ್ಲಿ ಯೋಗೇಶ್ ಕಥುನಿಯಾ 42.22 ದೂರ ಡಿಸ್ಕಸ್ ಎಸೆದು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭಾರತ ಪದಕ ಪದಕಪಟ್ಟಿಯಲ್ಲಿ 30ನೇ ಸ್ಥಾನದಲ್ಲಿದೆ.

27 ವರ್ಷದ ಯೋಗೇಶ್ ತಾವೆಸೆದ ಅತ್ಯುತ್ತಮ ಎಸೆತ ಇದಾಗಿದೆ. ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 46.86 ಮೀಟರ್‌ಗಳ ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಝೌನಿಸ್ 41.32 ಎಸೆದು ಕಂಚಿನ ಪದಕ ಗೆದ್ದರೆ, ಸ್ಲೋವಾಕಿಯಾದ ಡುಸಾನ್ ಲಕ್ಜ್ಕೊ 41.20 ಮೀಟರ್‌ ದೂರ ಎಸೆದು ನಾಲ್ಕನೇ ಸ್ಥಾನ ಪಡೆದರು.

ಯೋಗೇಶ್‌ ಹಿನ್ನೆಲೆ :
ದಿಲ್ಲಿಯಲ್ಲಿ 1997ರಲ್ಲಿ ಹುಟ್ಟಿದ ಯೋಗೇಶ್‌ ಕಾಥುನಿಯ ಬಿಕಾಂ ಪದವೀ­ಧರ. ಇವರ ತಂದೆ ಗ್ಯಾನ್‌ಚಂದ್ರ ಕಾಥುನಿಯ ಯೋಧ. ಯೋಗೇಶ್‌ ಕೇವಲ 8 ವರ್ಷದವರಿದ್ದಾಗ ಅಪರೂಪದ ನರದೌರ್ಬಲ್ಯಕ್ಕೆ ತುತ್ತಾದರು. ವೈದ್ಯಕೀಯ ಭಾಷೆಯಲ್ಲಿ ಅದನ್ನು ಗಿಲಿಯನ್‌ ಬಾರ್‌ ಸಿಂಡ್ರೋಮ್‌ (ಪಾರ್ಶ್ವವಾಯು) ಎನ್ನುತ್ತಾರೆ. ಪರಿಣಾಮ ಸೊಂಟದಿಂದ ಕೆಳಗ್ಗೆ ನಿಶ್ಶಕ್ತವಾಯಿತು. ನಡೆಯಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದರು. ಅವರ ತಾಯಿ ಮೀನಾ ದೇವಿ ಮಗನಿಗಾಗಿ ಫಿಸಿಯೊಥೆರಪಿ ಕಲಿತರು. ಪರಿಣಾಮ ಮುಂದಿನ ಮೂರು ವರ್ಷಗಳ ಅನಂತರ ಯೋಗೇಶ್‌ ನಡೆಯಲು ಆರಂಭಿಸಿದ್ದರು.

9ನೇ ಪದಕ ಗ್ಯಾರಂಟಿ :
ಸೋಮವಾರ ಬೆಳಗ್ಗೆ ನಡೆದ ಮಹಿಳೆಯರ ಎಸ್‌ಯು5 ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್‌ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕವೊಂದನ್ನು ಖಾತ್ರಿ ಪಡಿಸಿದ್ದಾರೆ. ಜತೆಗೆ ಭಾರತಕ್ಕೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 9ನೇ ಪದಕವೊಂದು ಖಾತರಿಯಾಗಿದೆ.

Share with Friends
author avatar
News Desk