ಪ್ಯಾರಿಸ್ ಪ್ಯಾರಾಲಿಂಪಿಕ್ಸ್ : ಹೈ ಜಂಪ್ನಲ್ಲಿ ನಿಶಾದ್ ಕುಮಾರ್ಗೆ ಬೆಳ್ಳಿ
ಬೆಂಗಳೂರು: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಟಿ47 ಹೈ ಜಂಪ್ ಸ್ಪರ್ಧೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 24 ವರ್ಷದ ವಿಶೇಷ ಅಥ್ಲೀಟ್ ಫೈನಲ್ನಲ್ಲಿ 2.4 ಮೀ ಎತ್ತರಕ್ಕೆ ನೆಗೆಯುವ ಮೂಲಕ ಸತತ 2ನೇ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. 2021ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ಇದೇ ಸ್ಪರ್ಧೆಯಲ್ಲಿ ನಿಶಾದ್ ಬೆಳ್ಳಿ ಗೆದ್ದಿದ್ದರು.
ನಿಶಾದ್ ಕುಮಾರ್ ಪದಕ ಗೆಲುವಿನೊಂದಿಗೆ ಕೂಟದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 7ಕ್ಕೆ ಏರಿದೆ. ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ಭಾರತ ಪದಕ ಪಟ್ಟಿಯ 27ನೇ ಸ್ಥಾನದಲ್ಲಿದೆ. ಭಾರತ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಒಟ್ಟು 19 ಪದಕಗಳನ್ನು ಗೆದ್ದಿತ್ತು. ಅದರಲ್ಲಿ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳು ಸೇರಿವೆ ಈ ಬಾರಿ ಪದಕಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ನಿಶಾದ್ ಕುಮಾರ್ ತಮ್ಮ 6ನೇ ವಯಸ್ಸಿನಲ್ಲಿ ಸಂಭವಿಸಿದ ಅಪಘಾತ ಒಂದರಲ್ಲಿ ಕೈ ಕಳೆದುಕೊಂಡರು. ಕುಟುಂಬದವರ ಕೃಷ್ಇ ಭೂಮಿಯಲ್ಲಿ ಇರಿಸಲಾಗಿದ್ದ ಹುಲ್ಲು ಕುಯ್ಯುವ ಯಂತ್ರಕ್ಕೆ ಕೈ ಹಾಕಿದ್ದರಿಂದ ಬಲ ಅಂಗೈ ಕಳೆದುಕೊಳ್ಳುವಂತ್ತಾಗಿತ್ತು. ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳದ ನಿಶಾದ್, ಕುಟುಂಬದವರ ಬೆಂಬಲದಿಂದ ಪ್ಯಾರಾ ಕ್ರೀಡೆಯಲ್ಲಿ ಸಾಧನೆ ಮೆರೆದಿದ್ದಾರೆ.
ತಾಯಿ ತುಂಬಿದ ಪ್ರೇರಣೆಯಿಂದ ಮೊದಲಿಗೆ ವಾಲಿಬಾಲ್ನಲ್ಲಿ ತೊಡಗಿದರು. ನಂತರ ಡಿಸ್ಕಸ್ ಥ್ರೋ ಪ್ರಯತ್ನ ಮಾಡಿ ಕೊನೆಗೆ ಪ್ಯಾರಾ ಹೈ ಜಂಪ್ ಆಯ್ಕೆ ಮಾಡಿದರು. ಪ್ಯಾರಾ ಕ್ರೀಡೆಯಲ್ಲಿ 2009ರಿಂದ ಈವರೆಗೆ ಹಂತಹಂತವಾಗಿ ಬೆಳೆದು ಬಂದಿದ್ದಾರೆ. ಜಪಾನ್ನಲ್ಲಿ ನಡೆದ 2024ರ ಪ್ಯಾರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲೂ ನಿಶಾದ್ ಬೆಳ್ಳಿ ಪದಕ ಗೆದಿದ್ದಾರೆ.
