BlogLatestರಾಜ್ಯ-Karnataka

ಸೆಪ್ಟಂಬರ್ ತಿಂಗಳಲ್ಲಿ ಸಾಲು ಸಾಲು ಬ್ಯಾಂಕ್ ರಜೆ, ಇಲ್ಲಿದೆ ರಜಾದಿನಗಳ ವಿವರ

ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ಹಬ್ಬಗಳ ಸರಣಿಯೇ ಇದ್ದು, ಗಣೇಶ ಚತುರ್ಥಿ, ಈದ್‌ ಮಿಲಾದ್‌, ಓಣಂ ಹಾಗೂ ನಾರಾಯಣಗುರು ಜಯಂತಿ ಸೇರಿದಂತೆ ಹಲವು ಹಬ್ಬ, ಜಯಂತಿಗಳು ಬರಲಿವೆ. ಸೆಪ್ಟಂಬರ್ 14ರಿಂದ 16ರವರೆಗೆ ಸತತ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಬ್ಯಾಂಕ್ ರಜೆಗಳಿವೆ. ಸೆಪ್ಟಂಬರ್ 7ರಂದು ವಿನಾಯಕ ಚತುರ್ಥಿ ಇದ್ದರೆ, ಸೆಪ್ಟಂಬರ್ 16 ಸೋಮವಾರದಂದು ಈದ್ ಮಿಲಾದ್ ಹಬ್ಬಕ್ಕೆ ರಜೆ ಇದೆ.

ಹಬ್ಬಗಳು, ರಾಷ್ಟ್ರೀಯ ದಿನಾಚರಣೆಗಳಲ್ಲದೆ ಸ್ಥಳೀಯ ಹಬ್ಬಗಳಿಗೂ ಬ್ಯಾಂಕ್‌ಗಳಿಗೆ ರಜೆಗಳಿವೆ. ಇದರ ಜತೆಗೆ ಶನಿವಾರ ಹಾಗೂ ಭಾನುವಾರದ ರಜೆಗಳೂ ಸೇರಿವೆ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ ರಜೆಗಳು ರಾಜ್ಯಗಳಿಂದ ರಾಜ್ಯಗಳಿಗೆ ಬದಲಾಗುತ್ತವೆ.

ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆಗೆ ಅಡ್ಡಿಯಿಲ್ಲ :
ಇನ್ನು ಬ್ಯಾಂಕ್‌ಗಳು ಮುಚ್ಚಿರುವಾಗಲೂ ಬ್ಯಾಂಕ್‌ ಎಟಿಎಂಗಳು ತೆರೆದಿರಲಿವೆ. ಗ್ರಾಹಕರು ನಗದು ಪಡೆಯಲು ಈ ಸೇವೆಯನ್ನು ಬಳಸಿಕೊಳ್ಳಬಹುದು. ಇದಲ್ಲದೆ ಎಲ್ಲಾ ಬ್ಯಾಂಕ್‌ಗಳ ಆನ್‌ಲೈನ್‌ ಸೇವೆಗಳೂ ದಿನದ 24 ಗಂಟೆಯೂ ಚಾಲ್ತಿಯಲ್ಲಿರುತ್ತವೆ. ಆನ್‌ಲೈನ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳ ಮೂಲಕ ವಾರಾಂತ್ಯ ಹಾಗೂ ರಜಾ ದಿನಗಳಲ್ಲೂ ಜನರು ಬ್ಯಾಂಕ್‌ ಕೆಲಸಗಳನ್ನು ಮುಗಿಸಿಕೊಳ್ಳಬಹುದು.

ನೆಗೋಷಿಯೇಬಲ್‌ ಇನ್‌ಸ್ಟ್ರುಮೆಂಟ್ಸ್‌ ಆಕ್ಟ್‌ ಅಡಿಯಲ್ಲಿ ವಾರ್ಷಿಕ ರಜಾ ಕ್ಯಾಲೆಂಡರ್‌ನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಕಟಿಸುತ್ತದೆ. ಇದರಲ್ಲಿ ಈ ರಜೆಗಳು ಉಲ್ಲೇಖವಾಗಿವೆ.

ರಜಾ ದಿನಗಳ ಪಟ್ಟಿ :
ಸೆಪ್ಟೆಂಬರ್‌ 1: ಭಾನುವಾರ – ದೇಶಾದ್ಯಂತ ಬ್ಯಾಂಕ್‌ಗಳಿಗೆ ವಾರದ ರಜೆ
ಸೆಪ್ಟೆಂಬರ್‌ 7: ಶನಿವಾರ – ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಬ್ಯಾಂಕ್‌ಗಳು ಮುಚ್ಚಿರಲಿವೆ.
ಸೆಪ್ಟೆಂಬರ್‌ 8: ಭಾನುವಾರ – ದೇಶದೆಲ್ಲೆಡೆ ಬ್ಯಾಂಕ್‌ಗಳಿಗೆ ವಾರದ ರಜೆ
ಸೆಪ್ಟೆಂಬರ್‌ 14: ಶನಿವಾರ – ದೇಶಾದ್ಯಂತ ಬ್ಯಾಂಕ್‌ಗಳಿಗೆ ಎರಡನೇ ಶನಿವಾರದ ರಜೆ
ಸೆಪ್ಟೆಂಬರ್‌ 15: ಭಾನುವಾರ – ವಾರದ ರಜೆ ಕಾರಣಕ್ಕೆ ದೇಶದೆಲ್ಲೆಡೆ ಬ್ಯಾಂಕ್‌ಗಳು ತೆರೆಯುತ್ತಿಲ್ಲ
ಸೆಪ್ಟೆಂಬರ್‌ 16: ಸೋಮವಾರ – ಈದ್‌ ಮಿಲಾದ್‌ ಪ್ರಯುಕ್ತ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಸೆಪ್ಟೆಂಬರ್ 22: ಭಾನುವಾರ – ವಾರದ ರಜೆ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಬ್ಯಾಂಕ್‌ಗಳು ಮುಚ್ಚಿರಲಿವೆ.
ಸೆಪ್ಟೆಂಬರ್ 28: ಶನಿವಾರ – ನಾಲ್ಕನೇ ಶನಿವಾರದ ಪ್ರಯುಕ್ತ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜೆ
ಸೆಪ್ಟೆಂಬರ್‌ 29: ಭಾನುವಾರ – ದೇಶಾದ್ಯಂತ ಬ್ಯಾಂಕ್‌ಗಳಿಗೆ ವಾರದ ರಜೆ

Share with Friends
author avatar
News Desk