BlogLatestರಾಷ್ಟ್ರೀಯ-National

ಕೇಂದ್ರ ಸರ್ಕಾರಿ ನೌಕರರಿಗೆ ನೂತನ ಏಕೀಕೃತ ಪಿಂಚಣಿ ಯೋಜನೆ

ನವದೆಹಲಿ: ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಕನಿಷ್ಠ ಪಿಂಚಣಿ ಒದಗಿಸುವ ಗುರಿ ಹೊಂದಿರುವ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಪ್ರಸಾರ ಮತ್ತು ಮಾಹಿತಿ ಖಾತೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಸಂಪುಟ ಏಕೀಕೃತ ಪಿಂಚಣಿ ಯೋಜನೆಯನ್ನು ಅನುಮೋದಿಸಿದೆ. ಮೊದಲನೆಯದಾಗಿ ಶೇ.50ರಷ್ಟು ಖಚಿತ ಪಿಂಚಣಿ, ಎರಡನೆಯದಾಗಿ ಕುಟುಂಬ ಪಿಂಚಣಿಯನ್ನು ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಖಾತರಿಪಡಿಸುತ್ತಿದೆ.

ಈ ಯೋಜನೆಯಿಂದ ಸುಮಾರು 23 ಲಕ್ಷ ಕೇಂದ್ರ ಸರ್ಕಾರದ ನೌಕರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರಗಳೂ ಕೂಡ ಈ ಯೋಜನೆ ಜಾರಿಗೊಳಿಸಿದರೆ, ಸುಮಾರು 90 ಲಕ್ಷ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್) ಅಥವಾ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಮಧ್ಯೆ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಜ್ಯ ಸರ್ಕಾರಗಳು ಏಕೀಕೃತ ಪಿಂಚಣಿ ಯೋಜನೆ ಅಳವಡಿಕೊಳ್ಳುವ ಬಗ್ಗೆ ತೀರ್ಮಾನ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನೂತನ ಏಕೀಕೃತ ಪಿಂಚಣಿ ಯೋಜನೆ ಪ್ರಮುಖಾಂಶಗಳು :
23 ಲಕ್ಷ ನೌಕರರಿಗೆ ಪ್ರಯೋಜನ
2025ರ ಏಪ್ರಿಲ್ 1ರಿಂದ ಯೋಜನೆ ಜಾರಿ
ನಿವೃತ್ತಿಯ ಕೊನೆಯ 12 ತಿಂಗಳಲ್ಲಿ ಪಡೆದ ಮೂಲ ವೇತನದ (ಬೇಸಿಕ್ ಪೇ) ಶೇ. 50ರಷ್ಟು ಹಣ ಪ್ರತಿ ತಿಂಗಳು ಪಿಂಚಣಿಯಾಗಿ ಖಾತೆಗೆ ಜಮೆ
25 ವರ್ಷಗಳ ಕನಿಷ್ಠ ಸೇವೆ ಹೊಂದಿದವರು ಯೋಜನೆಗೆ ಅರ್ಹರು.
ಖಚಿತ ಕುಟುಂಬ ಪಿಂಚಣಿ – ಸರ್ಕಾರಿ ನೌಕರನ ಮರಣ ಹೊಂದಿದಲ್ಲಿ ಕುಟುಂಬಕ್ಕೆ ಶೇ.60ರಷ್ಟು ಪಿಂಚಣಿ
ಖಚಿತ ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿಯಾದರೆ ತಿಂಗಳಿಗೆ -ರೂ.10000 ಪಿಂಚಣಿ

Share with Friends
author avatar
News Desk