ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಕಣಕ್ಕೆ ಇಳಿಯುವ ಸಾಧ್ಯತೆ
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ (Priyanka Vadra) ಕೇರಳದ ವಯನಾಡು (Wayanad) ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಈ ಬಾರಿ ಅಮೇಠಿ ಮತ್ತು ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿದ್ದರು. ರಾಹುಲ್ ಗಾಂಧಿ ಅವರು ಈ ರೆಡು ಕ್ಷೇತ್ರಗಳಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾಗುತ್ತದೆ. ಹಾಗಾಗಿ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ಭೂಗತ ಪಾತಕಿ ರವಿ ಪೂಜಾರಿಗೆ ಶಸ್ತ್ರಚಿಕಿತ್ಸೆ- ಆಸ್ಪತ್ರೆಗೆ ದಾಖಲು
ಇದಕ್ಕೆ ಪೂರಕ ಎಂಬಂತೆ ವಯನಾಡಿನ ಕಲ್ಪೆಟ್ಟಾದಲ್ಲಿ ರಾಹುಲ್ ಗಾಂಧಿ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಲು ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಕೇರಳ ಕಾಂಗ್ರೆಸ್ ಅಧ್ಯಕ್ಷ ಸುಧಾಕರನ್, ರಾಷ್ಟ್ರವನ್ನು ಮುನ್ನಡೆಸಬೇಕಾದ ರಾಹುಲ್ ಗಾಂಧಿ ಅವರು ವಯನಾಡಿನಲ್ಲಿ ಉಳಿಯುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ದುಃಖಿಸಬಾರದು. ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಅವರಿಗೆ ತಮ್ಮ ಎಲ್ಲಾ ಶುಭಾಶಯಗಳನ್ನು ಮತ್ತು ಬೆಂಬಲವನ್ನು ನೀಡಬೇಕು ಎಂದು ಹೇಳಿದ್ದರು.

ವಯನಾಡು ಕ್ಷೇತ್ರಕ್ಕೆ ಕಾಂಗ್ರೆಸ್‌ನ (Congress) ಬೇರೆ ಅಭ್ಯರ್ಥಿಯನ್ನು ನಿಲ್ಲಿಸುವುದಕ್ಕಿಂತ ಪ್ರಿಯಾಂಕಾ ವಾದ್ರಾ ಅವರನ್ನು ನಿಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಪ್ರಿಯಾಂಕಾ ವಾದ್ರಾ ಚುನಾವಣಾ ರಾಜಕಾರಣಕ್ಕೆ ಇಳಿದಿರಲಿಲ್ಲ. ಇದನ್ನೂ ಓದಿ: ಕುವೈತ್ ಅಗ್ನಿ ದುರಂತ: 45 ಭಾರತೀಯರ ಶವಗಳೊಂದಿಗೆ ಕೇರಳಕ್ಕೆ ಬಂದಿಳಿದ ಸೇನಾ ವಿಮಾನ
ಹಾಗೆ ನೋಡಿದರೆ ಈ ಬಾರಿಯ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಕಣಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕಣಕ್ಕೆ ಇಳಿದರೆ ಆ ಕ್ಷೇತ್ರದಲ್ಲಿ ಜಾಸ್ತಿ ಪ್ರಚಾರ ನಡೆಸಬೇಕಾಗುತ್ತದೆ. ದೇಶವ್ಯಾಪಿ ಪ್ರಚಾರ ನಡೆಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಆಯ್ಕೆಯಾದರೆ ಬಿಜೆಪಿಗೆ ಕುಟುಂಬ ರಾಜಕಾರಣದ ಅಸ್ತ್ರ ಸಿಗುತ್ತದೆ ಎಂಬ ಕಾರಣಕ್ಕೆ ಪ್ರಿಯಾಂಕಾ ಹಿಂದೇಟು ಹಾಕಿದ್ದರು ಎಂದು ವರದಿಯಾಗಿತ್ತು. ಈಗ ಕೆಲ ಕೈ ನಾಯಕರು ವಯನಾಡಿನಿಂದ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

ವಯನಾಡ್‌ನಲ್ಲಿ ರಾಹುಲ್ ಗಾಂಧಿ 3,64,422 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ರಾಹುಲ್ ಗಾಂಧಿ 6,47,445 ಮತಗಳನ್ನು ಪಡೆದರೆ ಸಿಪಿಐನಿಂದ ಸ್ಪರ್ಧಿಸಿದ್ದ ಅನ್ನಿ ರಾಜ 2,83,023 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ ಸುರೇಂದ್ರನ್ 1,41,045 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ: ಪ್ರದೀಪ್ ಈಶ್ವರ್
