
ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ನಿಷೇಧಿತ ವಸ್ತು ಪತ್ತೆ : ಡಿಸಿಪಿ ಎಂ. ನಾರಾಯಣ್
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ್ ಮಾಹಿತಿ ನೀಡಿದ್ದಾರೆ.
ಕಳೆದ 11ರಂದು ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಹೈ ಸೆಕ್ಯುರಿಟಿ ಸೆಲ್‌ನಲ್ಲಿ ರೆಡ್ಮಿ ಮೊಬೈಲ್, ಚಾರ್ಜರ್, ಸಿಮ್ ಕಾರ್ಡ್, ಪೆನ್‌ಡ್ರೈವ್ ಹಾಗೂ ಡೈರಿ ಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಈ ಸಂಬಂಧ ಸಿಸಿಬಿ ವತಿಯಿಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೆನ್‌ಡ್ರೈವ್‌ನಲ್ಲಿ ವಿಡಿಯೋಗಳು ಪತ್ತೆಯಾಗಿವೆ ಎಂಬ ಕೆಲ ಮಾಧ್ಯಮಗಳ ವರದಿಯನ್ನು ಡಿಸಿಪಿ ಎಂ. ನಾರಾಯಣ್ ತಳ್ಳಿಹಾಕಿದ್ದು, “ಇದು ಸತ್ಯಕ್ಕೆ ದೂರವಾದ ಸುದ್ದಿ” ಎಂದು ಸ್ಪಷ್ಟಪಡಿಸಿದ್ದಾರೆ. ಜೈಲಿನಲ್ಲಿ ಪತ್ತೆಯಾದ ಎಲ್ಲ ನಿಷೇಧಿತ ವಸ್ತುಗಳನ್ನು ಸೀಜ್ ಮಾಡಿ, ಸೀಲ್ ಮಾಡಲಾಗಿದ್ದು, ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸೀಲ್ಡ್ ಕವರ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಮೊಬೈಲ್‌ನ ಪಾಸ್‌ವರ್ಡ್‌ನ್ನು ಆರೋಪಿಗಳು ಇನ್ನೂ ನೀಡಿಲ್ಲ. ಮೊಬೈಲ್ ಅನ್ನು ಯಾರು ಬಳಸುತ್ತಿದ್ದರು ಹಾಗೂ ಅದು ಜೈಲಿನೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ನಡೆಯಲಿದೆ. ತಾಂತ್ರಿಕ ಸಾಕ್ಷ್ಯಗಳು ಲಭ್ಯವಾದ ಬಳಿಕ ಆರೋಪಿಗಳ ವಿಚಾರಣೆ ನಡೆಸಲಾಗುವುದು. ನಂತರ ಪಾಸ್‌ವರ್ಡ್, ಸಿಡಿಆರ್ ಸೇರಿದಂತೆ ಇತರೆ ಮಾಹಿತಿಗಳನ್ನು ಪರಿಶೀಲಿಸಲಾಗುತ್ತದೆ ಎಂದು ಡಿಸಿಪಿ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರೈ ಅವರನ್ನು ಇನ್ನೂ ವಿಚಾರಣೆ ನಡೆಸಿಲ್ಲ. ತನಿಖೆಯ ಮುಂದಿನ ಹಂತದಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜೈಲಿನಲ್ಲಿ ಜಾಮರ್‌ಗಳಿದ್ದರೂ 2G ಮತ್ತು 3G ನೆಟ್‌ವರ್ಕ್‌ಗಳು ಲಭ್ಯವಾಗುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ರೆಡ್ಮಿ ಕಂಪನಿಗೂ ಪತ್ರ ಬರೆಯಲಾಗುವುದು ಎಂದಿದ್ದಾರೆ.
ಈ ಹಿಂದೆ ಜೈಲಿನಲ್ಲಿ ಪತ್ತೆಯಾಗಿದ್ದ ಸಿಮ್ ಕಾರ್ಡ್‌ಗಳನ್ನೂ ಪರಿಶೀಲಿಸಲಾಗಿದ್ದು, ಅವುಗಳನ್ನು ಫೇಕ್ ಐಡಿ ಮೂಲಕ ಪಡೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಪ್ರಕರಣದ ಸಂಪೂರ್ಣ ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ಡಿಸಿಪಿ ಎಂ. ನಾರಾಯಣ್ ತಿಳಿಸಿದ್ದಾರೆ.
