Latestರಾಜಕೀಯ | Politics

ಬಿಡದಿ ಟೌನ್‌ಶಿಪ್‌ ವಿರುದ್ಧ ಜೆಡಿಎಸ್‌ ಪಾದಯಾತ್ರೆಗೆ ಪೊಲೀಸರ ತಡೆ: ಆ.18ಕ್ಕೆ ವಿಧಾನಸೌಧ ಮುತ್ತಿಗೆಗೆ ಕರೆ

ರಾಮನಗರ: ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ವಿರೋಧಿಸಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಬೈರಮಂಗಲದಿಂದ ಆರಂಭವಾಗಿದ್ದ ಮೂರು ದಿನಗಳ ಬೃಹತ್‌ ಪಾದಯಾತ್ರೆಗೆ ಪೊಲೀಸರು ತಡೆ ಹಾಕಿದ ಹಿನ್ನೆಲೆಯಲ್ಲಿ, ಶಾಂತಿಯುತವಾಗಿ ಪಾದಯಾತ್ರೆಯನ್ನು ಅಂತ್ಯಗೊಳಿಸಲಾಗಿದೆ ಎಂದು ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಣಿಮಿಣಿಕೆ ಬಳಿ ಪಾದಯಾತ್ರೆ ಆಗಮಿಸುತ್ತಿದ್ದಂತೆ ನಗರದ ಗಡಿಭಾಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಮೆರವಣಿಗೆಯನ್ನು ತಡೆದರು. ಪೊಲೀಸರ ಒತ್ತಡದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮುಕ್ತಾಯಗೊಳಿಸಲಾಗಿದ್ದು, ರೈತರ ಹೋರಾಟ ಮಾತ್ರ ನಿಲ್ಲುವುದಿಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಆ.18ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಹೋರಾಟ

ಆಗಸ್ಟ್‌ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ಬೃಹತ್‌ ಹೋರಾಟ ನಡೆಸಲಾಗುವುದು ಎಂದು ನಿಖಿಲ್‌ ಕುಮಾರಸ್ವಾಮಿ ಘೋಷಿಸಿದರು. ರೈತರ ಭೂಮಿ ಉಳಿಸುವ ಹೋರಾಟವನ್ನು ಮುಂದುವರಿಸುವುದಾಗಿ ಅವರು ಹೇಳಿದರು.

ಪೊಲೀಸರ ಮೇಲೆ ಸರ್ಕಾರದ ಒತ್ತಡ: ನಿಖಿಲ್‌ ಆರೋಪ

ಕಣಿಮಿಣಿಕೆ ಬಳಿ ಮಾತನಾಡಿದ ನಿಖಿಲ್‌, ಪೊಲೀಸರಿಗೆ ಒತ್ತಡ ಹೇರಿ ಪಾದಯಾತ್ರೆಗೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದರು. ಬೈರಮಂಗಲದಲ್ಲಿ ಕಳೆದ 517 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ಭೂಮಿಯನ್ನು ಕಸಿದುಕೊಳ್ಳಲು ಮುಂದಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹಿಂದೆ ಇದೇ ಜಿಲ್ಲೆಯ ಜನರ ಬಳಿ ಪೆನ್ನು-ಪೇಪರ್‌ ಕೇಳಿದ್ದರು. ಈಗ ರೈತರ ಭೂಮಿ ಕಸಿದುಕೊಳ್ಳಲು ಅದೇ ಪೆನ್ನು-ಪೇಪರ್‌ ಬಳಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ನಿಖಿಲ್‌, ಈ ಎಲ್ಲ ಬೆಳವಣಿಗೆಗಳಿಗೆ ಸ್ಥಳೀಯ ಶಾಸಕ ಬಾಲಕೃಷ್ಣ ಅವರೇ ಕಾರಣ ಎಂದು ಆರೋಪಿಸಿದರು.

‘ರಿಯಲ್‌ ಎಸ್ಟೇಟ್‌ ಸರ್ಕಾರ’ ಎಂದು ವಾಗ್ದಾಳಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಆಗಿರುವುದಕ್ಕೆ ತಾವು ಹೊಟ್ಟೆಕಿಚ್ಚು ಪಟ್ಟಿಲ್ಲ. ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದ್ದೇವೆ. ಆದರೆ ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸಲು ಮುಂದಾಗಿಲ್ಲ ಎಂದು ನಿಖಿಲ್‌ ಟೀಕಿಸಿದರು.

ರೈತರ ಒಪ್ಪಿಗೆ ಪಡೆಯದೇ ನಿಯಮಗಳನ್ನು ಗಾಳಿಗೆ ತೂರಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ದೇವೇಗೌಡರ ಕುಟುಂಬ ಯಾವಾಗಲೂ ರೈತರ ಪರ ನಿಲ್ಲಲಿದೆ. ಕಾನೂನು ಹೋರಾಟದ ಜೊತೆಗೆ ಅನ್ನದಾತರ ರಕ್ಷಣೆಗೆ ಜೆಡಿಎಸ್‌ ಸಿದ್ಧವಿದೆ ಎಂದರು.

‘ಎಕರೆಗೆ ₹3 ಕೋಟಿ ನೀಡಿದರೂ ಭೂಮಿ ಕೊಡುವುದಿಲ್ಲ’

ರೈತರಿಗೆ ಎಕರೆಗೆ ₹3 ಕೋಟಿ ನೀಡುವ ಆಫರ್‌ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ನಿಖಿಲ್‌ ಕುಮಾರಸ್ವಾಮಿ ತಿರುಗೇಟು ನೀಡಿದರು.

“ನಿಮ್ಮ ಹಣಕ್ಕೆ ರೈತರು ಬಲಿಯಾಗುವುದಿಲ್ಲ. ಒಂದಿಂಚೂ ಭೂಮಿಯನ್ನು ನಿಮಗೆ ಕೊಡುವುದಿಲ್ಲ. ಸ್ವಾಭಿಮಾನಿ ರೈತರನ್ನು ಹಣದಲ್ಲಿ ಅಳೆಯಬೇಡಿ. ನಿಮ್ಮ ಹಣದ ಆಮಿಷಕ್ಕೆ ಇಲ್ಲಿ ಯಾರೂ ತಲೆಬಾಗುವುದಿಲ್ಲ” ಎಂದು ನಿಖಿಲ್‌ ಹೇಳಿದರು.

ರೈತರು ಚೆಕ್‌ ಪಡೆಯುತ್ತಿದ್ದಾರೆ ಎಂದು ಪದೇಪದೇ ಹೇಳಲಾಗುತ್ತಿದೆ. ಎಷ್ಟು ಮಂದಿ ರೈತರು ಚೆಕ್‌ ಪಡೆದಿದ್ದಾರೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು. ಜಿಲ್ಲೆಯಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳ ಮೂಲಕ ರೈತರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದೂ ಆರೋಪಿಸಿದರು.

‘ಒಕ್ಕಲಿಗರು ಸಿಎಂ ಆಗಿರುವುದಕ್ಕೆ ನಮಗೆ ಹೊಟ್ಟೆಕಿಚ್ಚಿಲ್ಲ’

ಒಕ್ಕಲಿಗರು ಮುಖ್ಯಮಂತ್ರಿಯಾಗಿರುವುದಕ್ಕೆ ಜೆಡಿಎಸ್‌ಗೆ ಹೊಟ್ಟೆಕಿಚ್ಚು ಎಂಬ ಅಪಪ್ರಚಾರ ಮಾಡಲಾಗುತ್ತಿದೆ ಎಂದು ನಿಖಿಲ್‌ ಹೇಳಿದರು.

“ನಾವು ಸಾವಿರಾರು ಕೋಟಿ ಆಸ್ತಿ ಹೊಂದಿರುವ ಮುಖ್ಯಮಂತ್ರಿಯ ಪರ ನಿಲ್ಲಬೇಕಾ? ಬಡ ರೈತರ ಪರ ನಿಲ್ಲಬೇಕಾ?” ಎಂದು ಪ್ರಶ್ನಿಸಿದ ಅವರು, ಯಾರೂ ಧೈರ್ಯ ಕಳೆದುಕೊಳ್ಳಬಾರದು. ಎಷ್ಟೇ ಅಡೆತಡೆಗಳು ಬಂದರೂ ಹೋರಾಟ ನಿಲ್ಲುವುದಿಲ್ಲ. ಹೋರಾಟದಿಂದ ಒಂದೇ ಒಂದು ಹೆಜ್ಜೆಯನ್ನೂ ಹಿಂದೆ ಇಡುವುದಿಲ್ಲ ಎಂದು ಘೋಷಿಸಿದರು.

‘ದೇವೇಗೌಡರು ರೈತರ ಪರ ನಿಲ್ಲುವುದು ನಮ್ಮ ಧರ್ಮ’

ಕಳೆದ 15 ದಿನಗಳ ಹಿಂದೆ ತಮ್ಮ ಕುಟುಂಬದಲ್ಲಿ ಸಂಭವಿಸಿದ ಆಘಾತದ ನಡುವೆಯೂ ಎಚ್‌.ಡಿ. ದೇವೇಗೌಡರು ರೈತರ ಪರವಾಗಿ ನಿಲ್ಲಲು ಬಂದಿದ್ದಾರೆ ಎಂದು ನಿಖಿಲ್‌ ಭಾವುಕರಾಗಿ ಹೇಳಿದರು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ರೈತರ ಒಪ್ಪಿಗೆ ಪಡೆಯದೇ ಕದ್ದುಮುಚ್ಚಿ ಜೆಎಂಸಿ ಮಾಡಲು ಪ್ರಯತ್ನಿಸಲಾಗಿದೆ. ಇದನ್ನು ವಿರೋಧಿಸಿದ ಮಹಿಳೆಯರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ತಿಳಿಸಿದರು.

“ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಶಾಂತಿಯುತವಾಗಿ ಪ್ರತಿಭಟನೆಯನ್ನು ಕೈಬಿಟ್ಟಿದ್ದೇವೆ. ಆದರೆ ಆಗಸ್ಟ್‌ 18ರಂದು ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮುಂದುವರಿಯಲಿದೆ” ಎಂದು ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Share with Friends
author avatar
News Desk