
ಸಿಲಿಕಾನ್ ಸಿಟಿಯಲ್ಲಿ ಮಂದುವರೆದ ಫುಟ್ ಪಾತ್ ಒತ್ತುವರಿ: ಸಂಪೂರ್ಣ ನ್ಯೂಸ್ ವರದಿಗೆ ಎಚ್ಚೆತ್ತ GBA ಅಧಿಕಾರಿಗಳು..!
ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲೇ ನಡೆದುಕೊಂಡು ಹೋಗಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. K.R. ಮಾರ್ಕೆಟ್ ಬಳಿಯ ಫ್ಲೈಓವರ್ ಕೆಳಗೆ ಫುಟ್‌ಪಾತ್ ಸಂಪೂರ್ಣ ಒತ್ತುವರಿಯಾಗಿತ್ತು. ಸಂಪೂರ್ಣ ನ್ಯೂಸ್ ಈ ಕುರಿತು ವಿಶೇಷ ವರದಿ ಪ್ರಸಾರ ಮಾಡುತ್ತಿದ್ದಂತೆ GBA ಅಧಿಕಾರಿಗಳು ಎಚ್ಚೆತ್ತು ತೆರವು ಕಾರ್ಯಾಚರಣೆ ನಡೆಸಿದ್ದಾರೆ.
K.R. ಮಾರ್ಕೆಟ್ ಬಳಿಯ ಫ್ಲೈಓವರ್ ಕೆಳಗೆ ದಶಕಗಳಿಂದಲೂ ಫುಟ್‌ಪಾತ್‌ನಲ್ಲಿ ವ್ಯಾಪಾರಿಗಳು ಅಕ್ರಮವಾಗಿ ಅಂಗಡಿ ಹಾಕಿಕೊಂಡಿದ್ದರು. ತರಕಾರಿ, ಹಣ್ಣು, ಬಟ್ಟೆ, ಪ್ಲಾಸ್ಟಿಕ್ ಸಾಮಗ್ರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಂದ ಫುಟ್‌ಪಾತ್ ಸಂಪೂರ್ಣ ಮುಚ್ಚಿ ಹೋಗಿತ್ತು.ಶಾಲಾ ಮಕ್ಕಳು, ವೃದ್ಧರು, ಅಂಗವಿಕಲರು ರಸ್ತೆಯಲ್ಲಿ ಜೀವದ ಹಂಗು ತೊರೆದು ಓಡಾಡುವಂತಾಗಿತ್ತು. “ಓಡಾಡಲು ಕಷ್ಟ.. ಫುಟ್‌ಪಾತ್ ತೆರವು ಮಾಡುವಂತೆ” ಸ್ಥಳೀಯರು ಮತ್ತು ಸಾರ್ವಜನಿಕರು ಬಹಳ ದಿನಗಳಿಂದ ಆಗ್ರಹಿಸುತ್ತಿದ್ದರು.
ಅಕ್ರಮ ಒತ್ತುವರಿ ಬಗ್ಗೆ ಸಂಪೂರ್ಣ ನ್ಯೂಸ್ ಕಳೆದ ವಾರ ವಿಶೇಷ ವರದಿ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿತ್ತು. ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ GBA ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.ಸಂಪೂರ್ಣ ನ್ಯೂಸ್ ವರದಿಯ ಬಳಿಕ ಇಂದು ಬೆಳಿಗ್ಗೆ K.R.ಮಾರ್ಕೆಟ್ ಬಳಿಯ ಫ್ಲೈಓವರ್ ಕೆಳಗೆ ಬೃಹತ್ ತೆರವು ಕಾರ್ಯಾಚರಣೆ ನಡೆಸಲಾಯಿತು.
GBA ಆಯುಕ್ತ ಜಗದೀಶ್ ಅವರ ನೇತೃತ್ವದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಪಾಲಿಕೆ ಸಿಬ್ಬಂದಿ, ಜೆಸಿಬಿ ಯಂತ್ರಗಳ ಮೂಲಕ ಅಕ್ರಮವಾಗಿ ಹಾಕಿದ್ದ ಶೆಡ್‌ಗಳು, ಟೇಬಲ್, ಬೆಂಚ್‌ಗಳನ್ನು ತೆರವುಗೊಳಿಸಲಾಯಿತು. ಟ್ರಾಫಿಕ್‌ಗೆ ಅಡ್ಡಿಯಾಗುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಯಿತು.ಒತ್ತುವರಿ ತೆರವಿನಿಂದಾಗಿ ಈಗ ಜನರು ಆರಾಮವಾಗಿ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗಬಹುದಾಗಿದೆ. “ಬಹಳ ದಿನದ ಬೇಡಿಕೆ ಈಗ ಈಡೇರಿದೆ” ಎಂದು ಸ್ಥಳೀಯರು ಮತ್ತು ಅಂಗಡಿ ಮಾಲೀಕರು ಸ್ವಾಗತಿಸಿದ್ದಾರೆ.ಮತ್ತೆ ಒತ್ತುವರಿಯಾಗದಂತೆ ನಿಗಾ ವಹಿಸುವುದಾಗಿ GBA ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಅಕ್ರಮ ಒತ್ತುವರಿ ಇರುವ ಇತರ ಸ್ಥಳಗಳಲ್ಲೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಆಯುಕ್ತ ಜಗದೀಶ್ ಹೇಳಿದರು.
